ಮರಣದಂಡನೆಗೊಳಗಾಗಿದ್ದ ಕೈದಿ ಹಿಂಡಲಗಾ ಜೈಲಿನಿಂದ ಪರಾರಿ

ಬೆಳಗಾವಿ: ನಗರದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿ ಮುರುಗೇಶ ಅಲಿಯಾಸ್ ಮುರುಗ ಅಲಿಯಾಸ್ ಕಣ್ಣಮುಚ್ಚಿ, ಜೈಲಿನಿಂದ ಪರಾರಿಯಾಗಿದ್ದಾನೆ. ವೈರಿಂಗ್​ ಮಾಡಲು ಬಳಸುವ ಕೊಳವೆ ತರಹದ ಕಬ್ಬಿಣದ ಪೈಪ್​ಗಳನ್ನು ಜೋಡಿಸಿ ಕಂಪೌಂಡ್ ಜಂಪ್​ ಮಾಡಿ ಈತ ಪರಾರಿಯಾಗಿದ್ದಾನೆ ಅಂತ ಹೇಳಲಾಗ್ತಿದೆ. ವಿಶೇಷ ಪ್ರಕರಣವೊಂದರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತ ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯಾ ನಗರದವನು. 2015ರ ಮೇನಲ್ಲಿ ಕೊಳ್ಳೇಗಾಲದ ಹರಳೆ ಗ್ರಾಮದ ತೋಟದ ಮನೆಯಲ್ಲಿ 8 ವರ್ಷದ ಬಾಲಕಿ ಸೇರಿ ಐವರನ್ನು ಕೊಚ್ಚಿ ಕೊಲೆ ಮಾಡಿದ್ದ. ಈ ಹಂತಕನಿಗೆ ಚಾಮರಾಜನಗರ ಜಿಲ್ಲಾ ಸೆಷೆನ್ಸ್‌ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು.