ಶ್ರೀಲಂಕಾ ಸರಣಿ ಸ್ಫೋಟಕ್ಕೆ ರಾಷ್ಟ್ರಪತಿ, ಪ್ರಧಾನಿ, ಕಾಂಗ್ರೆಸ್​ ಖಂಡನೆ

ನವದೆಹಲಿ: ಶ್ರೀಲಂಕಾದಲ್ಲಿ ಇಂದು ನಡೆದ ಸರಣಿ ಸ್ಫೋಟವನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಖಂಡಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತ ಖಂಡಿಸುತ್ತದೆ. ಅಲ್ಲಿನ ಸರ್ಕಾರಕ್ಕೆ ಹಾಗೂ ಮೃತರಿಗೆ ನಮ್ಮ ಸಂತಾಪವಿದೆ. ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ನಡೆದ ಇಂಥ ಹಿಂಸಾಚಾರಕ್ಕೆ ನಾಗರೀಕ ಸಮಾಜದಲ್ಲಿ ಸ್ಥಾನವಿಲ್ಲ. ಶ್ರೀಲಂಕಾ ಜನರೊಂದಿಗೆ ನಾವಿದ್ದೇವೆ ಎಂದು ರಾಷ್ಟ್ರಪತಿ ಟ್ವೀಟ್​ ಮಾಡಿದ್ದಾರೆ.

ಇನ್ನು ಪ್ರಧಾನಿ ಮೋದಿ ಟ್ವೀಟ್​ ಮಾಡಿ, ಶ್ರೀಲಂಕಾದಲ್ಲಿ ನಡೆದಿರುವ ಭಯಾನಕ ಸ್ಫೋಟವನ್ನ ತೀವ್ರವಾಗಿ ಖಂಡಿಸುತ್ತೇನೆ. ಶ್ರೀಲಂಕಾದ ಜನರೊಂದಿಗೆ ಭಾರತ ನಿಲ್ಲುತ್ತದೆ. ಈ ಘಟನೆಯಲ್ಲಿ ಮಡಿದವರ ಕುಟುಂಬಸ್ಥರಿಗೆ ನನ್ನ ಸಂತಾಪ ಹಾಗೂ ಗಾಯಗೊಂಡವರು ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಸಿಂಹಳಿ ಭಾಷೆಯಲ್ಲಿ ಕೂಡ ಮೋದಿ ಟ್ವೀಟ್​ ಮಾಡಿದ್ದಾರೆ.

ಹಾಗೇ ರಾಷ್ಟ್ರೀಯ ಕಾಂಗ್ರೆಸ್​ ಕೂಡ ಈ ಸ್ಫೋಟವನ್ನು ಖಂಡಿಸಿ ಟ್ವೀಟ್​ ಮಾಡಿದೆ. ಈಸ್ಟರ್​​ ದಿನದಂದು ಶ್ರೀಲಂಕಾದ ಚರ್ಚ್​​ಗಳಲ್ಲಿ ನಡೆದ ದಾಳಿಯಿಂದ ತುಂಬಾ ಬೇಸರವಾಗಿದೆ. ಇಂಥ ನೋವಿನ ಸಂದರ್ಭದಲ್ಲಿ ನಾವು ಶ್ರೀಲಂಕಾ ಜನರೊಂದಿಗೆ ನಿಲ್ಲುತ್ತೇವೆ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಟ್ವೀಟ್​ ಮಾಡಿ, ಈಸ್ಟರ್​​ ದಿನ ಶ್ರೀಲಂಕಾದಿಂದ ಬಂದಿರೋ ಈ ಸುದ್ದಿಯಿಂದ ತುಂಬಾ ಬೇಸರವಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ಮಾನವೀಯತೆಯ ಶತ್ರುಗಳು ಯಶಸ್ವಿಯಾಗಲು ಅವಕಾಶ ನೀಡಬಾರದು. ಭಯೋತ್ಪಾದಕ ಕೃತ್ಯಗಳನ್ನ ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv