ಮಕ್ಕಳು ಆಗಬೇಕು, ಅಂದ್ರೆ ನೀವು ಇವುಗಳನ್ನು ಬಿಡಲೇ ಬೇಕು..!

ಮನೆ ತುಂಬಾ ಮಕ್ಕಳಿರಬೇಕು ಅನ್ನೋದು ಹಳೇ ಮಾತು. ಅದೇ ಮುಂದುವರೆದು ಸ್ಮಾಲ್​ ಫ್ಯಾಮಿಲಿ ಹ್ಯಾಪಿ ಫ್ಯಾಮಿಲಿ ಅನ್ನೊ ಟ್ರೆಂಡ್​ ಶುರುವಾಯ್ತು. ಆದ್ರೀಗ ಒಂದಾದ್ರೂ ಮಗು ಆದ್ರೂ ಆಗ್ಲಪ್ಪಾ ಅಂತಾ ಪರಿತಪಿಸ್ತಾ ಇರೋ ಜೋಡಿಗಳ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ, ಸಿಟಿಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚು. ಇಂದಿನ ಲೈಫ್​ ಸ್ಟೈಲ್, ಟೆನ್ಷನ್, ದುಡಿಯುವ ಲೆವೆಲ್ಲಿಗೆ ತಕ್ಕಂತೆ ಹೆಚ್ಚುತ್ತಲೇ ಹೋಗುವ ಚಟಗಳು ಹಾಗೂ ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಮುಂತಾದವುಗಳು ಇಂದಿನ ಯುವ ಜನಾಂಗವನ್ನು ಹೆಚ್ಚಿನ ಪ್ರಮಾಣದಲ್ಲಿ ಬಂಜೆ ತನಕ್ಕೆ ದೂಡುತ್ತಿದೆ. ಹಾಗಿದ್ರೆ ಮಕ್ಕಳು ಆಗಬೇಕು ಅಂದ್ರೆ ಏನು ಮಾಡಬೇಕು ಅಂದ್ರಾ? ಸಿಂಪಲ್​.. ಈ ಕೆಳಗೆ ಇರೊ ವಿಷಯಗಳನ್ನು ಫಾಲೋ ಮಾಡಿ.

ಕುಡಿತ ಮತ್ತು ಸ್ಮೋಕ್

ವರ್ಕ್ ಹಾರ್ಡ್-ಪಾರ್ಟಿ ಹಾರ್ಡ್ ಅನ್ನೋ ಅಮೆರಿಕಾದ ಕಲ್ಚರ್ ಬೆಂಗಳೂರಿನಂಥ ನಗರಗಳಿಗೆ ಎಂಟ್ರಿಯಾಗಿ ಯಾವುದೋ ಕಾಲ ಆಯ್ತು. ಇದ್ರಿಂದಾಗಿ ಬಾರ್​, ಪಬ್​, ರೆಸ್ಟೋರೆಂಟ್​ಗಳ ಬ್ಯಾಂಕ್​ ಬ್ಯಾಲೆನ್ಸ್ ಏನೋ ಏರುತ್ತಿದೆ. ಆದ್ರೆ, ಕುಡಿತ ಹಾಗೂ ಸ್ಮೋಕಿಂಗ್​ನಿಂದಾಗಿ ಯುವಕರ ಸ್ಪರ್ಮ್​ನ ಕ್ವಾಲಿಟಿ ಹಾಗೂ ಯುವತಿಯರ ಅಂಡಾಣು ಗುಣಮಟ್ಟ ಕುಗ್ಗುತ್ತದೆ. ಸ್ಮೋಕಿಂಗ್ ಅಂತೂ ಕೇವಲ ಕ್ಯಾನ್ಸರ್​ ಕಾರಕ ಮಾತ್ರವಲ್ಲ, ಇದು 10% ರಿಂದ 40% ನಷ್ಟು ಬಂಜೆತನ ಉಂಟು ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ. ಯಾಕಂದ್ರೆ ಧೂಮಪಾನದಿಂದ ರಕ್ತ ಸೇರೋ ನಿಕೋಟಿನ್, ಕಾರ್ಬನ್ ಮತ್ತಿತರ ರಾಸಾಯನಿಕಗಳು ಮಾಡೋ ಯಡವಟ್ಟೇ ಅಂಥದ್ದು ಅಂತಾರೆ ಡಾಕ್ಟರ್ಸ್​​

ಅತಿಯಾದ ಸಿಹಿ ತಿಂಡಿ ಸೇವಿಸುವುದು

ಸ್ವೀಟ್ಸ್​ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಸಂತೋಷಕರ ವಿಷಯಗಳಗೆ ಸ್ವೀಟ್​ ಹಂಚಿ ಖುಷಿಪಡೋದು ಕಾಮನ್. ಆದ್ರೆ ಇದ್ರಿಂದ ಇನ್ಸುಲಿನ್ ಲೆವೆಲ್​ ಕಡಿಮೆಯಾಗುತ್ತೆ ಹಾಗೂ ಡಯಾಬಿಟಿಸ್​ ಹೆಚ್ಚಾಗುವ ಸಾಧ್ಯತೆ ಇರುತ್ತೆ ಅಂತಾ ಕೇಳಿದ್ವಿ. ಆದರೆ, ಹೆಚ್ಚು ಸ್ವೀಟ್ಸ್​ ತಿನ್ನೋದ್ರಿಂದ ಸುಸ್ತು ಉಂಟಾಗುವುದಲ್ಲದೆ, ನಿಮ್ಮ ಸ್ಪರ್ಮ್(ವೀರ್ಯಾಣು)ಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಅಂತಾರೆ ವೈದ್ಯರು.

ಲ್ಯಾಪ್​ ಟಾಪ್ಸ್..!

ಈಗಿನ ಜನರೇಶನ್​ ಟೆಕ್ನಾಲಜಿಯನ್ನು ಹೆಚ್ಚು ಬಳಸುತ್ತಾರೆ. ಅದ್ರಲ್ಲಿ ಲ್ಯಾಪ್​ಟಾಪ್​ ಕೂಡ ಒಂದು. ಒಂದು ಬಟನ್​ ಕ್ಲಿಕ್​ ಮಾಡಿದ್ರೆ ಸಾಕು ಎಲ್ಲಾ ಇನ್​ಫಾರ್ಮೇಶನ್ ಕಂಪ್ಯೂಟರ್​ನ ಸ್ಕ್ರೀನ್​ ಮೇಲೆಯೇ ​ಸಿಗುತ್ತೆ. ಲ್ಯಾಪ್​ಟಾಪ್​ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುಷ್ಟಪರಿಣಾಮಗಳು ಕೂಡ ಇವೆಯಂತೆ. ಎಕ್ಸ್​ಪರ್ಟ್ಸ್​ ಪ್ರಕಾರ ಲ್ಯಾಪ್​ಟಾಪ್​ಗಳನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡೋದ್ರಿಂದ ವೀರ್ಯಾಣುಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಂತೆ. ಲ್ಯಾಪ್​ಟಾಪ್​ ನಿರಂತರವಾಗಿ ಉಪಯೋಗಿಸುವವರ ವೀರ್ಯಾಣುಗಳು ಡ್ಯಾಮೇಜ್​ ಆಗುತ್ತವೆ ಎನ್ನಲಾಗಿದೆ.

 ಮೊಬೈಲ್ ಫೋನ್ಸ್..!

ಕೆಲವರಿಗೆ ಕೈನಲ್ಲಿ ಮೊಬೈಲ್​ ಇಲ್ಲಾ ಅಂದ್ರೆ ಕೈಕಾಲೇ ಓಡಲ್ಲಾ. ಮೊಬೈಲ್​ನಲ್ಲಿ ಕರೆನ್ಸಿ ಇಲ್ಲಾ ಅಂದ್ರೂ ಇಂಟರ್​ನೆಟ್​ ಇರ್ಲೇಬೇಕು. ಆದ್ರೆ ಮೊಬೈಲ್​ ಫೋನ್​ ಅನ್ನು ಹೆಚ್ಚು ಬಳಸುವುದರಿಂದ ಹಾಗೂ ಜೇಬಲ್ಲಿ ಇರಿಸಿಕೊಳ್ಳುವುದರಿಂದಾಗಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕುಂಠಿತವಾಗುತ್ತದೆ ಮತ್ತು ತಂದೆಯಾಗುವ ಕನಸು ನಸನಾಗೋಕೆ ಕಷ್ಟಪಡಬೇಕಾಗುತ್ತೆ ಅಂತಾರೆ ಎಕ್ಸ್​ಪರ್ಟ್ಸ್​.

ಬಿಗಿಯಾದ ಒಳುಡುಪು

ಬಿಗಿಯಾದ ಒಳುಡುಪುಗಳನ್ನು ಬಳಸುವುದರಿಂದ ಗುಪ್ತಾಂಗದ ಬಿಸಿ ಹೆಚ್ಚಿ, ವೀರ್ಯಾಣುವಿನ ಉತ್ಪಾದನೆಯಲ್ಲಿ ಕೊರತೆ ಉಂಟಾಗುತ್ತದೆ. ಸಂಶೋಧನೆ ಪ್ರಕಾರ ದೇಹದ ಟೆಂಪರೇಚರ್​ಗಿಂತ ಗುಪ್ತಾಂಗದ ಟೆಂಪರೇಚರ್​ ಯಾವಾಗಲೂ ಕಡಿಮೆ ಇರಬೇಕಂತೆ. ಹಾಗಾಗಿ ಟೈಟ್​ ಅಂಡರ್​ವೇರ್​ಗಳನ್ನು ಬಳಸದಿರುವುದು ಒಳ್ಳೆಯದು ಅಂತಿದ್ದಾರೆ ಸಂಶೋಧಕರು.

ವಿಶೇಷ ಬರಹ: ಚಂದನಾ ಶ್ಯಾಂ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv