ಹನೂರು ಬಿಜೆಪಿ ಟಿಕೆಟ್ ಆಲ್ ಮೋಸ್ಟ್ ಫೈನಲ್

ಬೆಂಗಳೂರು: ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್​​​ ಹಂಚಿಕೆಗೆ ಎದುರಾಗಿದ್ದ ಗೊಂದಲ ಬಹುತೇಕ ಶಮನಗೊಂಡಿದೆ. ಹನೂರು ಕ್ಷೇತ್ರಕ್ಕಾಗಿ ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಡಾ. ಪ್ರೀತನ್ ನಾಗಪ್ಪ ನಡುವೆ ಪೈಪೋಟಿ ಜೋರಾಗಿತ್ತು. ಆದರೆ ನಿನ್ನೆ ಇಬ್ಬರು ನಾಯಕರ ಜೊತೆಯೂ ಮಾತುಕತೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ಶಮನಗೊಳಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ಸಂಜೆ ಬಿ.ಎಸ್​​​.ಯಡಿಯೂರಪ್ಪ, ತಮ್ಮ ಡಾಲರ್ಸ್ ಕಾಲೋನಿ ಮನೆಯಲ್ಲಿ ಉಭಯ ನಾಯಕರ ಜೊತೆ ಸಭೆ ನಡೆಸಿದ್ರು. ಇದರಲ್ಲಿ ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನ ಪರಿಮಳಾ ನಾಗಪ್ಪರ ಪುತ್ರ ಡಾ. ಪ್ರೀತನ್ ನಾಗಪ್ಪಗೆ ಕೊಡೋದು ಅಂತ ಫೈನಲ್ ಆಗಿದೆ. ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ವಿ. ಸೋಮಣ್ಣ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸೋ ಬಗ್ಗೆ ಚಿಂತನೆ ನಡೆಸಿದ್ರು. ಬೆಂಗಳೂರಿನ ಗೋವಿಂದರಾಜನಗರ ಮತ್ತು ಚಾಮರಾಜನಗರದ ಹನೂರು ಕ್ಷೇತ್ರಗಳ ಮೇಲೆ ಅವರ ಕಣ್ಣಿತ್ತು.
ಸಭೆಯಲ್ಲಿ ಪರಿಮಳಾ ನಾಗಪ್ಪರ ಎದುರಲ್ಲೇ ಬಿಎಸ್​ವೈ, ನೀವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಿ ಸೋಮಣ್ಣನವರೇ ಅಂತ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ನನಗೆ ಹನೂರಿನಲ್ಲಿ ಸ್ಪರ್ಧಿಸಬೇಕೆಂಬ ಆಸೆ ಇದೆ. ಆದರೆ ಕಾರ್ಯಕರ್ತರು ಗೋವಿಂದರಾಜ ನಗರದಲ್ಲಿ ಸ್ಪರ್ಧಿಸಿ ಅಂತಿದ್ದಾರೆ ಅಂತ ಹೇಳಿದ್ದಾರೆ. ಇದಕ್ಕೆ ಮರು ಪ್ರಶ್ನೆ ಕೇಳಿದ, ಬಿಎಸ್​ವೈ, ನೀವು ಹಾಲಿ ಪರಿಷತ್ ಸದಸ್ಯರು. ನಿಮಗೆ ಇನ್ನೂ ಮೂರೂವರೆ ವರ್ಷ ಅವಧಿ ಬಾಕಿಯಿದೆ ಎಂದಾಗ ಪರಿಷತ್ ಸದಸ್ಯ ಸ್ಥಾನವೇ ಬೇರೆ, ಶಾಸಕ ಸ್ಥಾನವೇ ಬೇರೆ ಎಂದು ಸೋಮಣ್ಣ ಹೇಳಿದ್ದಾರಂತೆ.
ಈ ವೇಳೆ ನೀವು ಹನೂರಿನಲ್ಲಿ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ನಡೆದುಕೊಂಡಿದ್ದನ್ನು ನಾನು ಗಮನಿಸಿದ್ದೇನೆ ಎಂದು ಬಿಎಸ್​​​​​​​​​​​​​​​​​​​​​​​​ವೈ ಹೇಳಿದಾಗ ಬಿಎಸ್​​​​​​​​​​​​​​​​​​​​​ವೈ ಮಾತಿಗೆ ಉತ್ತರಿಸಲಾಗದೇ ವಿ.ಸೋಮಣ್ಣ ಸುಮ್ಮನಾಗಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಪರಿಮಳಾ ನಾಗಪ್ಪ, ನನ್ನ ಮಗ ಡಾ.ಪ್ರೀತನ್ ನಾಗಪ್ಪನಿಗೆ ಬಿಟ್ಟು ಬೇರೆ ಯಾರಿಗೇ ಟಿಕೆಟ್ ಸಿಕ್ಕರೂ ಸೋಲು ಗ್ಯಾರಂಟಿ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಡೆಗೆ ಹನೂರು ನಿಮಗೆ ಬೇಡ. ಪ್ರೀತನ್ ನಾಗಪ್ಪ ಸ್ಪರ್ಧಿಸಲಿ ಎಂದು ಬಿಎಸ್​​​ವೈ ಸೋಮಣ್ಣಗೆ ಹೇಳಿದ್ದು, ಟಿಕೆಟ್ ಬಗ್ಗೆ ಇದ್ದ ಗೊಂದಲವನ್ನ ಬಿಎಸ್​ವೈ ಬಗೆಹರಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *