ಮಳೆಗಾಗಿ ಶ್ರೀ ರಾಮಲಿಂಗೇಶ್ವರನಿಗೆ ಜಲಾಭಿಷೇಕ..!

ರಾಯಚೂರು: ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬಯಲು ಸೀಮೆ ರಾಯಚೂರಿನಲ್ಲಿ ಜನರು ಮಳೆಗಾಗಿ ದೇವರ ಮೊರೆ ಹೊಗಿದ್ದಾರೆ. ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ರಾಯಚೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು ರೈತಾಪಿ ವರ್ಗ ಆತಂಕಕ್ಕಿಡಾಗಿದೆ. ವರುಣನ ಮುನಿಸನ್ನು ಶಾಂತಗೊಳಿಸಿ, ಉತ್ತಮ ಮಳೆಯಾಗಲೆಂದು ನಗರದ ಗ್ರಾಮ ದೇವತೆ ಶ್ರೀ ರಾಮಲಿಂಗೇಶ್ವರ ದೇವರಿಗೆ ಇಂದು ಬೆಳ್ಳಿಗ್ಗೆಯಿಂದ ಅಖಂಡ ಜಲಾಭಿಷೇಕ ಪೂಜೆ ನೆರವೇರಿಸಲಾಗುತ್ತಿದೆ. ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿಯಿಂದ ಈ ಪೂಜೆ ಹಮ್ಮಿಕೊಳ್ಳಲಾಗಿದೆ.
ಇನ್ನೂ, ಈ ಪೂಜೆಯಲ್ಲಿ ರಾಯಚೂರು ನಗರದ ಕಿಲ್ಲೇಬೃಹನ್ಮಠದ ಷ.ಬ್ರ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಹಾಗೂ ಸೋಮವಾರಪೇಟೆ ಹಿರೇಮಠದ ಷ.ಬ್ರ. ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿಗಳಿಂದ ಪೂಜೆ ನೆರವೇರುತ್ತಿದೆ. ಸತತ 24 ಗಂಟೆಗಳ ಕಾಲ ರಾಮಲಿಂಗೇಶ್ವರ ದೇವರಿಗೆ ಜಲಾಭಿಷೇಕ, ಆರಾಧನೆ ನಡೆಯಲಿದ್ದು, ಉತ್ತಮ ಮಳೆಯಾಗಿ ನಾಡಿನ ರೈತಾಪಿ ವರ್ಗ, ಸಾರ್ವಜನಿಕರು ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯಿಂದ ಬದುಕುವಂತಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಜಲಾಭಿಷೇಕ ಪೂಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv