ನಾನು ಈಗಲೂ ನಟ ಪ್ರಕಾಶ್ ರೈ ಅಭಿಮಾನಿ, ಅವ್ರ ಸೈದ್ಧಾಂತಿಕ ವಿಚಾರಕ್ಕೆ ಮಾತ್ರ ವಿರೋಧ -ಪ್ರತಾಪ್ ಸಿಂಹ

ಮೈಸೂರು: ನಾನು ಪ್ರಕಾಶ್ ರೈ ಅಭಿಮಾನಿ. ಎಲ್ಲರಿಗೂ ಸೋಲಿನ ನೋವು ಇರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಕಾಶ್ ರೈ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನಡೆ ಇರಬಹುದು. ಅವರ ಚಿತ್ರರಂಗದ ಜೀವನಕ್ಕೆ ಶುಭವಾಗಲಿ ಅಂತ ಹಾರೈಸುತ್ತೇನೆ. ನಟನೆಯ ವಿಚಾರದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ನಾನು ಅವರ ಅಭಿಮಾನಿ. ಆದ್ರೆ ಅವರ ಸೈದ್ಧಾಂತಿಕ ವಿಚಾರಗಳಿಗೆ ನಮ್ಮ ವಿರೋಧ ಇದೆ. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ರು. ಆಗ ನಾನು ಕಟುವಾಗಿ ಟೀಕಿಸಿದ್ದೆ. ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ‌. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ಪ್ರಕಾಶ್ ರೈ ಬಗ್ಗೆ ಪ್ರತಾಪ್ ಸಿಂಹ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಚುನಾವಣೆಗೆ ಮುನ್ನ ಪ್ರತಾಪ್‌ಸಿಂಹ ವಿರುದ್ಧ ಪ್ರಕಾಶ್ ರೈ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದರು. ಪ್ರತಾಪ್‌ ಸಿಂಹ ಚಾಲೆಂಜ್‌ ನೀಡುವುದಕ್ಕಾಗಿಯೇ ಪ್ರಕಾಶ್ ಚುನಾವಣೆಗೆ ಬಂದಿದ್ದರು.

ಮಹಾರಾಜರನ್ನ ಬಿಟ್ರೆ ಮೈಸೂರಲ್ಲಿ ಅತಿಹೆಚ್ಚು ಅಂತರದಿಂದ ನಾನು ಗೆದ್ದಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. 1,38,637 ಮತಗಳ ಅಂತರದಿಂದ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇಶಾದ್ಯಂತ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಒಬ್ಬರೇ ಅಭ್ಯರ್ಥಿ. ಈ ಬಾರಿಯ ಚುನಾವಣೆಯಲ್ಲಿ ದೇಶಕ್ಕೆ ನರೇಂದ್ರ ಮೋದಿ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಸೋತರೆ, ಅದು ನನ್ನ ಸೋಲು ಎಂದು ಯಡಿಯೂರಪ್ಪ ಹೇಳಿದ್ದರು. ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪಗೆ ನಾನು ಆಭಾರಿಯಾಗಿರುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮಂತ್ರಿಯಾಗಬೇಕು ಅನ್ನೋ ಆಸೆ ಇಟ್ಟು ನಾನು ರಾಜಕಾರಣಕ್ಕೆ ಬಂದವನಲ್ಲ. ಉತ್ತಮ ಕೆಲಸ ಮಾಡಬೇಕು ಅನ್ನೋ ಆಸೆಯಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಮಂತ್ರಿ ಆಗೋ ಆಸೆ ನನಗೆ ಇಲ್ಲ. ಮೋದಿ ಜೊತೆ ಪಾರ್ಲಿಮೆಂಟ್‌ನಲ್ಲಿ ಕುಳಿತುಕೊಳ್ಳೋ ಅವಕಾಶ ಸಿಕ್ಕಿದೆ. ನಾನು ಪತ್ರಕರ್ತನ ಸಂವೇದನೆ ಇದೆ, ಅಂತರಂಗದಲ್ಲಿ ನಾನು ಈಗಲೂ ಪತ್ರಕರ್ತನೇ. ನಾನೊಬ್ಬ ಟಿಪಿಕಲ್ ರಾಜಕಾರಣಿ ಅಲ್ಲ. ನಾನು ಕೆಲಸ ಮಾಡೋಕಷ್ಟೇ ಇಲ್ಲಿ ಬಂದೆ. ಮಂತ್ರಿ ಆಸೆ ಇಲ್ಲವೇ ಇಲ್ಲ. ಹಿರಿಯ ನಾಯಕರು ಕಟ್ಟಿರುವ ಹೆಮ್ಮರ ಬಿಜೆಪಿ. ಹೊಸದಾಗಿ ಗೆದ್ದವರು ಮಂತ್ರಿ ಪದವಿ ಬಗ್ಗೆ ಆಸೆ ಪಡಬಾರದು. ಕೇತ್ರದ ಜನರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್, ಜೆಡಿಎಸ್ ನಲ್ಲಿರೋ ಮೋದಿ ಅಭಿಮಾನಿಗಳು ನನಗೆ ಮತ ಹಾಕಿದ್ದಾರೆ. ಹೀಗಾಗಿ ನನಗೆ ಮತ ಹಾಕಿದ ಕಾಂಗ್ರೆಸ್, ಜೆಡಿಎಸ್‌ನವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv