‘ಚೈತ್ರಾ ಕುಂದಾಪುರ ಧೈರ್ಯಶಾಲಿ ಹೆಣ್ಣುಮಗಳು, ಅವಳ ಪರ ನಾವಿದ್ದೇವೆ’

ದಾವಣಗೆರೆ: ಚೈತ್ರ ಕುಂದಾಪುರ ಹಾಗೂ ಹಿಂದೂ ಜಾಗರಣ ವೇದಿಕೆಯ ಗುರುಪ್ರಸಾದ್ ಪಂಜಾ ಗುಂಪುಗಳ ನಡುವೆ ನಡೆದಿರುವ ಘರ್ಷಣೆ ಕುರಿತಾಗಿ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.

ಚೈತ್ರಾ ಕುಂದಾಪುರ ಒಂದು ಮಠದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಚೈತ್ರ ಕುಂದಾಪುರ ಮೇಲೆ ಗುರುಪ್ರಸಾದ್ ಪಂಜಾ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಆದರೂ ಚೈತ್ರ ಕುಂದಾಪುರ ಎದೆಗುಂದಿಲ್ಲ ಅವಳೊಬ್ಬ ಧೈರ್ಯಶಾಲಿ ಹೆಣ್ಣು ಮಗಳು. ಅನ್ಯಾಯವನ್ನು ಪ್ರಶ್ನೆ ಮಾಡಿದ್ದಕ್ಕೆ ವಿರೋಧಿಗಳು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅದೇನೇ ಆದರೂ ಚೈತ್ರ ಪರವಾಗಿ ನಾವು ಇದ್ದೇವೆ. ಈ ವಿಚಾರವಾಗಿ ನಾನು ಕುಕ್ಕೆಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧ. ನನ್ನ ಜೊತೆ ಚರ್ಚೆಗೆ ಯಾರು ಬೇಕಾದರೂ ಬರಬಹುದು ಎಂದು ಮುತಾಲಿಕ್​ ಸವಾಲು ಹಾಕಿದರು.

ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಶ ಬಲಿ ಪೂಜೆಗೆ ಸಂಬಂಧಿಸಿ ಹಿಂದೂ ಸಂಘಟನೆಗಳ ಎರಡು ಗುಂಪುಗಳ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ಗುದ್ದಾಟವು ಸಾಮಾಜಿಕ ತಾಣದಲ್ಲೂ ಬಹಿರಂಗ ವಾಗ್ವಾದಕ್ಕೂ ಕಾರಣವಾಗಿತ್ತು. ಹಿಂದೂ ಜಾಗರಣ ವೇದಿಕೆಯ ಗುರುಪ್ರಸಾದ್ ಪಂಜಾ ಮೇಲೆ ಚೈತ್ರ ಕುಂದಾಪುರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಚೈತ್ರ ಕುಂದಾಪುರ ಹಾಗೂ ಆಕೆಯ ಬೆಂಬಲಿಗರಾದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv