ಈಗ್ಲೂ ಹೇಳ್ತೇನೆ ಯಾರೇ ಸಮರ್ಥರಿದ್ದರೂ, ನಾನು ಕ್ಷೇತ್ರ ಬಿಟ್ಟುಕೊಡ್ತೇನೆ -ಪ್ರಜ್ವಲ್

ಬೆಂಗಳೂರು: ದೆಹಲಿಯಿಂದ ಕನ್ಯಾಕುಮಾರಿವರೆಗೂ ಡೈನಾಸ್ಟಿ ರಾಜಕೀಯ ಇದೆ ಅಂತಾ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಕುಟುಂಬ ರಾಜಕಾರಣ ವಿಚಾರವಾಗಿ ಫಸ್ಟ್ ನ್ಯೂಸ್​ ಜೊತೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ? ಕುಟುಂಬ ರಾಜಕಾರಣ‌ ಶಿವಮೊಗ್ಗದಲ್ಲಿ ಇಲ್ವಾ, ಬಳ್ಳಾರಿಯಲ್ಲಿ ಇಲ್ವಾ? ಈಗಲೂ ಹೇಳುತ್ತೇನೆ, ಯಾರೇ ಸಮರ್ಥರಿದ್ದರೂ ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ಅಂತಾ ಹೇಳಿದರು.

ಇದೇ ವೇಳೆ, ನಾನು ಎಂಟು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿತ್ತು. ನಾನು ಕಣಕ್ಕಳಿಯಬೇಕೆಂದು ಪಕ್ಷದ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನಾನು ಕಣಕ್ಕಿಳಿದಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಯಾರಿಂದಲೂ ವಿರೋಧ ಇಲ್ಲ. ಎ. ಮಂಜು ಒಬ್ಬರು ಬಿಜೆಪಿಗೆ ಹೋದಾಕ್ಷಣ ಎಲ್ಲರ ವಿರೋಧ ಅಂದ್ರೆ ಹೇಗೆ? ನಾನು ಯಾವುದಕ್ಕೂ ಧೈರ್ಯಗುಂದುವುದಿಲ್ಲ ಅಂತಾ ತಿಳಿಸಿದರು.

ಗೌಡರು ಗೆದ್ದೇ ಗೆಲ್ಲುತ್ತಾರೆ..
ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ. ತುರುವೇಕೆರೆ, ತಿಪಟೂರಲ್ಲಿ ನೀರಾವರಿ ಯೋಜನೆಗಳು ಸೇರಿದಂತೆ ಅಲ್ಲಿ ಅವರದ್ದೇ ಆದ ಕೊಡುಗೆಗಳಿವೆ. ಅದೆಲ್ಲ ಕೂಡ ದೇವೇಗೌಡರ ಗೆಲುವಿಗೆ ಸಹಾಯಕವಾಗಲಿದೆ ಅಂತಾ ಪ್ರಜ್ವಲ್​ ಹೇಳಿದರು.

ಗೆಲುವು ನಿಖಿಲ್ ಪರವಾಗಿದೆ..
ಈಗಾಗಲೇ ನಿಖಿಲ್​ನ್ನ ಗೆಲ್ಲಿಸಲು ಮಂಡ್ಯದ ಜನರು ತೀರ್ಮಾನ ಮಾಡಿದ್ದಾರೆ. ಮಂಡ್ಯಕ್ಕೆ ದೇವೇಗೌಡರು, ಕುಮಾರಸ್ವಾಮಿ ದೊಡ್ಡ ಕೊಡುಗೆ‌ ನೀಡಿದ್ದಾರೆ. ನಿನ್ನೆ ಜನ ಸೇರಿದಾಗಲೇ ಗೆಲುವು ನಿಖಿಲ್ ಪರವಾಗಿದೆ ಅಂತಾ ಗೊತ್ತಾಗಿದೆ ಅಂತಾ ಪ್ರಜ್ವಲ್​ ಹೇಳಿದರು.

ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ..
ಕಾಂಗ್ರೆಸ್ ನವರು‌ ನಮ್ಮ ಜೊತೆ ಇದ್ದಾರೆ. ಸಿದ್ದರಾಮಯ್ಯರನ್ನ ಭೇಟಿಯಾದಾಗ ಯಾವ ರೀತಿ ಚುನಾವಣೆ ಎದುರಿಸಬೇಕೆಂದು ಕೆಲ ಸಲಹೆ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್ ನವರು ಕೆಲಸ ಮಾಡ್ತಾರೆ. ಹಾಗೆಯೇ ಕಾಂಗ್ರೆಸ್​ನ 21 ಕ್ಷೇತ್ರದಲ್ಲಿ ಅವರ ಗೆಲುವಿಗೆ ನಾವು ಕೆಲಸ ಮಾಡುತ್ತೇವೆ ಅಂತಾ ಪ್ರಜ್ವಲ್​ ಹೇಳಿದರು.