ಸುಳ್ಳು ಮಾಹಿತಿ ನೀಡಿದ ಆರೋಪ, ಹಾಸನ ಡಿಸಿ ಅಂಗಳಕ್ಕೆ ಪ್ರಜ್ವಲ್ ಪ್ರಕರಣದ ಚೆಂಡು..!

ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಅನ್ನೋ ಆರೋಪ ಹಾಸನ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರ ಮೇಲಿದೆ. ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಕೀಲ ದೇವರಾಜ್ ಗೌಡ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನ ಅನ್ವಯ ಹಾಸನ ಜಿಲ್ಲಾ ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಪ್ರೀಯಾಂಕ ಮೇರಿ ಫ್ರಾನ್ಸಿಸ್​​ಗೆ ಚುನಾವಣಾ ಆಯೋಗ ವರದಿ ಕೇಳಿದೆ. ಹೀಗಾಗಿ ಪ್ರಜ್ವಲ್ ರೇವಣ್ಣರ ಭವಿಷ್ಯ ಹಾಸನದ ಡಿಸಿ ಕೈಯಲ್ಲಿದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ನಿನ್ನೆ, ಇಂದು ರಾಜ್ಯ ಚುನಾವಣಾ ಆಯೋಗ, ಹಾಸನ ಜಿಲ್ಲಾ ಚುನಾವಣಾ ಅಧಿಕಾರಿಗೆ ಎರಡು ಪತ್ರಗಳನ್ನು ಬರೆದಿದೆ. ದೇವರಾಜ್ ಗೌಡ ನೀಡಿರುವ ದೂರಿನಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ, ಆರ್​​ಪಿ ಆ್ಯಕ್ಟ್​ 1951ರ ಸೆಕ್ಷನ್ (ಪ್ರಜಾ ಪ್ರಾತಿನಿಧ್ಯ ಅಧಿನಿಯಮ) 125ಎ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬಹುದೆಂದು ಸೂಚಿಸಿದೆ. ಸಹಾಯಕ ಮುಖ್ಯ ಚುನಾವಣಾ ಅಧಿಕಾರಿ ಹೆಚ್.ರಾಘವೇಂದ್ರ ಅವರು ಹಾಸನ ಡಿಸಿ ಪ್ರಿಯಾಂಕ ಮೇರಿ ಪ್ರಾನ್ಸಿಸ್​​ಗೆ ಪತ್ರದಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.

ಮೇ 17ಕ್ಕೆ ವರದಿ ನೀಡಿ
ಈ ನಡುವೆ ಇಂದು ಮಧ್ಯಾಹ್ನ ಮತ್ತೊಂದು ಪತ್ರವನ್ನು ರಾಜ್ಯ ಚುನಾವಣಾ ಆಯೋಗದ ಸಾರ್ವಜನಿಕರ ಕುಂದು ಕೊರತೆಗಳ ಕೋಶದ ಹಿರಿಯ ಸಮಾಲೋಚಕರಾದ ಡಿ.ಎನ್.ನಾಯಕ್,  ಹಾಸನ ಡಿಸಿಗೆ ಬರೆದಿದ್ದಾರೆ. ‘ವಕೀಲ ದೇವರಾಜ್ ಗೌಡ ನೀಡಿರುವ ದೂರಿನಲ್ಲಿ ಪ್ರಜ್ವಲ್ ರೇವಣ್ಣ ಉಮೇದುವಾರಿಕೆಯಲ್ಲಿ ಅನೇಕ ಸುಳ್ಳು ಮಾಹಿತಿ ನೀಡಿರುವ ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಪತ್ರದೊಂದಿಗೆ ಅವುಗಳನ್ನು ಲಗತ್ತಿಸಿದ್ದೇವೆ. ಸದರಿ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ವಿವರವಾಗಿ (ಪ್ಯಾರಾ ವೈಸ್) ವರದಿ ನೀಡಿ’’ ಎಂದು ಸೂಚಿಸಿದ್ದಾರೆ. ಅದಕ್ಕಾಗಿ ಮೇ 17, 2019 ರ ಮಧ್ಯಾಹ್ನ 3 ಗಂಟೆಯೊಳಗೆ ವರದಿ ನೀಡಲು ಸಮಯವನ್ನೂ ನಿಗದಿ ಮಾಡಿದ್ದಾರೆ.

ವಿಷಯವನ್ನು ತುರ್ತೆಂದು ಪರಿಗಣಿಸಿ..!
ಈ ಆದೇಶದ ಜೊತೆ ಪತ್ರವನ್ನು ತುರ್ತು ವಿಷಯವೆಂದು ಪರಿಗಣಿಸಲು ಚುನಾವಣಾ ಆಯೋಗ ಡಿಸಿಗೆ ಸೂಚಿಸಿದೆ. ಇದರಿಂದಾಗಿ, ಪ್ರಕರಣ ಮಹತ್ವ ಪಡೆದುಕೊಂಡಿದ್ದು, ಡಿಸಿ ನೀಡುವ ವರದಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳೇನು..?

  1. ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ನಿಯಮದ ಪ್ರಕಾರ ಕನಿಷ್ಠ 5 ವರ್ಷ ಐಟಿ ರಿರ್ಟನ್ ಫೈಲ್ ಮಾಡಿಲ್ಲ
  2. ಚೆನ್ನಾಂಬಿಕ ಕನ್ವೇಷನ್ ಹಾಲ್​​ಗೆ ಸಾಲ ಪಡೆದಿದ್ದಾಗಿ ಹೇಳಿದ್ದು, ಐಟಿ ಫೈಲ್ ಮಾಡದೇ ಸಾಲ ಸಿಕ್ಕಿದ್ದು ಹೇಗೆ?
  3. ಚೆನ್ನಾಂಬಿಕ ಕನ್ವೇಷನ್ ಹಾಲ್ ಇಂದಿನ ಮಾರುಕಟ್ಟೆ ಬೆಲೆ ಘೋಷಣೆ ಮಾಡಿಲ್ಲ
  4. ಸಿಎನ್​​ಡಿ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಟ್​​​ನಲ್ಲಿ ಹೂಡಿಕೆ ತೋರಿಸಿದ್ದು, ಲಾಭ/ಬಡ್ಡಿ ಲೆಕ್ಕ ತೋರಿಸಿಲ್ಲ
  5. ತಂದೆಯಿಂದ ಬಂದ ಆಸ್ತಿಯ ಮಾರುಕಟ್ಟೆ ಮೌಲ್ಯ ಪಡೆಯಬೇಕು
  6. ಪ್ರಜ್ವಲ್ ಕೋಟ್ಯಾಂತರ ಸಾಲ ಪಡೆದಿದ್ದಾಗಿ ಹೇಳಿದ್ದು, ಕೊಟ್ಟವರು ಜನಪ್ರತಿನಿಧಿಗಳಾಗಿದ್ದಾರೆ ಹಾಗೂ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಅದಕ್ಕಾಗಿ ಅವರು ಸಲ್ಲಿಸಿದ ಆದಾಯ ಘೋಷಣೆ ದಾಖಲೆಗಳ ಪಡೆಯಬೇಕು
  7. ಪ್ರಜ್ವಲ್ ಅನೇಕರಿಗೆ ಸಾಲ ನೀಡಿದ್ದು, ಅದರ ಬಗ್ಗೆ ಆದಾಯ ತೆರಿಗೆಯಲ್ಲಿ ಘೋಷಣೆ ಮಾಡಿಕೊಂಡಿದ್ದ ಮಾಹಿತಿ ಪಡೆಯಬೇಕು
  8. ಪ್ರಜ್ವಲ್​​ಗೆ ತಾತ ದೇವೆಗೌಡರು ₹23 ಲಕ್ಷ ಸಾಲ ನೀಡಿದ್ದಾಗಿ ತಮ್ಮ ನಾಮಿನೇಷನ್​​ನಲ್ಲಿ ಹೇಳಿದ್ದಾರೆ. ಆ ಬಗ್ಗೆ ಪ್ರಜ್ವಲ್ ಉಮೇದುವಾರಿಕೆಯಲ್ಲಿ ಉಲ್ಲೇಖಿಸಿಲ್ಲ.

ಹೀಗೆ ಹಲವು ಆರೋಪಗಳನ್ನು ದೇವರಾಜ್ ಗೌಡ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿ ವರದಿ ನೀಡಿಲು ರಾಜ್ಯ ಮುಖ್ಯ ಚುನಾವಣಾ ಆಯೋಗ ಸೂಚಿಸಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv