ಸಿದ್ದರಾಮಯ್ಯರನ್ನ ಭೇಟಿಯಾದ ಪ್ರಜ್ವಲ್​ ರೇವಣ್ಣ

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತಾತ ಹೆಚ್​.ಡಿ.ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದಿದ್ದ ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಪ್ರಜ್ವಲ್ ರೇವಣ್ಣ ಸಂಜೆ ವೇಳೆಗೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿದ ಪ್ರಜ್ವಲ್, ಹಾಸನ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ರು. ಚುನಾವಣೆಗೆ ಮೊದಲೇ ನಾನು ಗೆಲ್ಲುತ್ತೇನೆಂದು ನೀವು ಹರಸಿ‌ ಕಳುಹಿಸಿದ್ರಿ, ನಿಮ್ಮ ಸಹಕಾರದಿಂದ ಇಂದು ಗೆಲ್ಲಲು ಸಾಧ್ಯವಾಗಿದೆ ಅಂತಾ ಪ್ರಜ್ವಲ್ ಧನ್ಯವಾದ ಅರ್ಪಿಸಿದ್ರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಸಿಕ್ಕಿರುವ ಅವಕಾಶ ಬಳಸಿಕೊಂಡು ಉತ್ತಮ ಕೆಲಸ ಮಾಡ್ಬೇಕು. ಮತ ಹಾಕಿದ ಜನರಿಗಾಗಿ ಕೆಲಸ ಮಾಡಿ ಅವರ ಮನಸ್ಸನ್ನು ಗೆಲ್ಲಿ ಎಂದು ಸಲಹೆ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹಾಸನದಲ್ಲಿ ಪ್ರಜ್ವಲ್​ಗೆ ಟಿಕೆಟ್​ ಕನ್​ಫರ್ಮ್​​ ಆಗ್ತಿದ್ದಂತೆ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದ ಪ್ರಜ್ವಲ್​ ತನ್ನ ಪರ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ರು. ಅದರಂತೆ ಸಿದ್ದರಾಮಯ್ಯ ಹಾಸನಕ್ಕೆ ತೆರಳಿ ಪ್ರಜ್ವಲ್​ ಪರ ಪ್ರಚಾರ ಮಾಡಿದ್ದರು. ಈ ಹಿನ್ನೆಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಪ್ರಜ್ವಲ್ ಧನ್ಯವಾದ ಸಲ್ಲಿಸಿದ್ರು. ಇನ್ನೊಂದೆಡೆ ರಾಜೀನಾಮೆ ನೀಡುತ್ತೇನೆ ಅಂದ ಬೆನ್ನಲ್ಲೇ ಸಿದ್ದರಾಮಯ್ಯರನ್ನು ಪ್ರಜ್ವಲ್​​ ರೇವಣ್ಣ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲ್ಲಿ ಅನೇಕ ಅನುಮಾನಕ್ಕೂ ಕಾರಣವಾಗಿದೆ.