ಬದಾಮಿಯಲ್ಲಿ ಕಳಪೆ ಕಾಮಗಾರಿಗೆ: ಶಾಸಕ ಸಿದ್ದರಾಮಯ್ಯ ಹಾಕ್ತಾರಾ ಬ್ರೇಕ್..!?

ಬಾಗಲಕೋಟೆ: ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಬದಾಮಿಯಲ್ಲಿ ನಡೀತಿರೋ ಕೆ-ಶಿಪ್​ ಕಾಮಗಾರಿ ಕಳಪೆಯಾಗಿದೆ ಅನ್ನೊ ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರೋದ್ರಿಂದ ಐತಿಹಾಸಿಕ ತಾಣದ ಜನ ದಿನನಿತ್ಯ ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಐತಿಹಾಸಿಕ ತಾಣವಾಗಿದ್ರೂ ಬದಾಮಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇನ್ನು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಬದಾಮಿ ಹೇಳಿಕೊಳ್ಳುವಷ್ಟೇನೂ ಅಭಿವೃದ್ಧಿಯಾಗಿಲ್ಲ. ಬದಾಮಿ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳ ತೆರವು ಮಾಡೋದಕ್ಕೆ ಎರಡ್ಮೂರು ವರ್ಷ ತಗೆದುಕೊಂಡಿದ್ದಾರೆ. ಇನ್ನು ರಸ್ತೆ ಅಗಲೀಕರಣ ಕಟ್ಟಡ ತೆರವಿಗಾಗಿ ನಿಯಮಾವಳಿ ಪ್ರಕಾರ ತೆರವು ಮಾಡಿಲ್ಲ ಅನ್ನೊ ಆರೋಪ ಸಹ ಜನರದ್ದು. ಸುಮಾರು 10 ಮೀಟರ್ ನಷ್ಟು ರಸ್ತೆ ಅಗಲೀಕರಣ ಮಾಡಬೇಕಿತ್ತು. ಆದ್ರೆ ಕಾಮಗಾರಿ ಟೆಂಡರ್ ಪಡೆದಿರೋ ಆರ್.ಎನ್.ಎಸ್ ಕಂಪನಿಯವರು ಡಿಪಿಆರ್ ಪ್ರಕಾರ ಕಾಮಗಾರಿ ಮಾಡ್ತಿಲ್ಲ. ಇನ್ನು ಕೆ-ಶಿಪ್ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದೆ ಎನ್ನಲಾಗ್ತಿದೆ.
ಇನ್ನು ಬದಾಮಿ ಪಟ್ಟಣದಲ್ಲಿ ಹಾದು ಹೋಗಿರೋ ರಸ್ತೆಯ ಎರಡೂ ಬದಿಯಲ್ಲಿ ಒಳಚರಂಡಿ ಕಾಮಗಾರಿ ನಡೀತಿದೆ. ಒಳಚರಂಡಿಯಲ್ಲಿ ಈಗಾಗಲೇ ಮಣ್ಣು ಬಿದ್ದು ನೀರು ಸರಿಯಾಗಿ ಹೋಗ್ತಿಲ್ಲ. ಟೆಂಡರ್ ನಿಯಮದಂತೆ ಕಾಮಗಾರಿಗೆ ಗುಣಮಟ್ಟದ ಸಿಮೆಂಟ್, ಕಬ್ಬಿಣ, ಮರಳನ್ನು ಬಳಸ್ತಿಲ್ಲ. ಅಂದಾಜು 5 ಕೋಟಿ ಕಳಪೆ ಕಾಮಗಾರಿ ನಡೆಯುತ್ತಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ.
ಬದಾಮಿ ಐತಿಹಾಸಿಕ ಕ್ಷೇತ್ರವಾದ್ರೂ ಅಭಿವೃದ್ಧಿ ಅನ್ನೋದು ಶೂನ್ಯವಾಗಿದೆ. ನೂತನವಾಗಿ ಶಾಸಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದು ಇಲ್ಲಿನ ಜನತೆ ಸಿದ್ದರಾಮಯ್ಯ ನಗರವನ್ನು ಅಭಿವೃದ್ಧಿ ಪಡಿಸ್ತಾರೆ ಅನ್ನೋ ನಂಬಿಕೆಯಿಟ್ಟುಕೊಂಡಿದ್ದಾರೆ. ಜೊತೆಗೆ ಶಾಸಕ ಸಿದ್ದರಾಮಯ್ಯ ಬದಾಮಿಯಲ್ಲಿ ನಡೆಯುತ್ತಿರೋ ಕಳಪೆ ಕಾಮಗಾರಿಗೆ ಬ್ರೇಕ್ ಹಾಕಬೇಕು ಅನ್ನೋದು ಸಹ ಇಲ್ಲಿನ ಜನರ ಒತ್ತಾಯ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv