ನಾಳೆ ನಿರ್ಧಾರವಾಗಲಿದೆ ರಾಹುಲ್​, ಅಮಿತ್​ ಶಾ, ವರುಣ್​ ಭವಿಷ್ಯ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಾಳೆ ನಡೆಯಲಿದೆ. ರಾಜ್ಯದಲ್ಲಿ ನಡೆಯಲಿರುವ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಲ್ಲಿ 237 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 2.43 ಕೋಟಿ ಮತದಾರರು ವೋಟಿಂಗ್ ಮಾಡಲಿದ್ದಾರೆ. ಚುನಾವಣೆ ನಿರ್ವಹಣೆಗೆ 2.03 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 2,174 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. 1,478 ಬೂತ್​ಗಳಲ್ಲಿ ವಿಡಿಯೋಗ್ರಾಫರ್​ಗಳನ್ನು ಹಾಗೂ 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಅಂತಾ ರಾಜ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಇನ್ನೂ 14 ಕ್ಷೇತ್ರಗಳ ಪೈಕಿ ಜೆಡಿಎಸ್ 3 ರಲ್ಲಿ ಸ್ಪರ್ಧಿಸುತ್ತಿದ್ದು, 11 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧಿಸ್ತಿದೆ. ಎಲ್ಲಾ 14 ರಲ್ಲೂ ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಶಿವಮೊಗ್ಗ ಹಾಗೂ ಕಲಬುರ್ಗಿ ಮತಕ್ಷೇತ್ರಗಳನ್ನು ಹೈವೋಲ್ಟೇಜ್ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಎಸ್. ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪರ ನಡುವೆ ನೇರ ಹಣಾಹಣಿ ಇದೆ. ಇನ್ನು ಕಲಬುರಗಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಹಾಗೂ ಕಾಂಗ್ರೆಸ್​ನಿಂದ ಜಿಗಿದು ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ.ಉಮೇಶ್ ಜಾಧವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರವೂ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಗಣಿತವಾಗಿದೆ. ಇಬ್ಬರ ನಡುವೆ ನೇರ ಹಣಾಹಣಿ ಸ್ಪರ್ಧೆ ಏರ್ಪಟ್ಟಿದೆ.
ಇನ್ನು ನಾಳೆ ಒಟ್ಟು 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 117 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 18 ರಂದು ಚುನಾವಣೆ ನಡೆಯಬೇಕಿದ್ದ ತ್ರಿಪುರಾ ಈಸ್ಟ್ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಅಲ್ಲಿಯು ನಾಳೆ ಮತದಾನ ನಡೆಯಲಿದೆ. ಹಾಗೆಯೇ ಕರ್ನಾಟಕದ ಜೊತೆಗೆ ಅಸ್ಸಾಮ್, ಬಿಹಾರ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಜಮ್ಮು-ಕಾಶ್ಮೀರ, ತ್ರಿಪುರಾ, ದಮನ್ ಅಂಡ್ ಡಿಯು ಮತ್ತು ದಾದ್ರಾ ನಗರ್ ಹವೇಲಿಯಲ್ಲಿ ಮತದಾನವಾಗಲಿದೆ.
ಈ ಪೈಕಿ, ಕೇರಳದಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಶಿ ತರೂರ್​ರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ಶಾ ಅವರು ಲೋಕಸಭೆಗೆ ಸ್ಫರ್ಧಿಸಿದ್ದು, ಗುಜರಾತ್​ನ ಗಾಂಧಿನಗರ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಇನ್ನೂ ಮಹಾರಾಷ್ಟ್ರದಿಂದ ಎನ್​ಸಿಪಿ ಅಧ್ಯಕ್ಷ ಶರತ್ ಪವಾರ್ ಅವರ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರು ಕಣದಲ್ಲಿದ್ದಾರೆ.
ಒಡಿಶಾದ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ನಾಳೆಯೇ ಮತದಾನವಾಗಲಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv