ಪತ್ನಿಯ ಅಣ್ಣನ ಮನೆಗೆ ಬೆಂಕಿ ಇಟ್ಟ ಪ್ರಕರಣ: ಆರೋಪಿ ಮೇಲೆ ಪೊಲೀಸ್​ ಫೈರಿಂಗ್​​..!

ಕಲಬುರ್ಗಿ: ಪತ್ನಿಯ ಅಣ್ಣನ ಮನೆಗೆ ಬೆಂಕಿ ಇಟ್ಟ ಪ್ರಕರಣದ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಆರ್‌.ಜೆ ನಗರ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಆರೋಪಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿದ್ದಾನೆ ಎನ್ನುವ ಮಾಹಿತಿ ಮೇರೆಗೆ ಅವುಗಳ ಜಪ್ತಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ನಗರ ಹೊರವಲಯದ ಸೇಡಂ ರಸ್ತೆಯ ರಾಯಲ್ ಡಾಬಾ ಬಳಿ ತೆಲ‌ಂಗಾಣದ ತಂದೂರ ಪಟ್ಟಣದ ನಿವಾಸಿ ಆರೋಪಿ ಮಹ್ಮದ್ ಮುಸ್ತಫಾ ಪೋಲಿಸರ ಮೇಲೆಯೇ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಬ್ರಹ್ಮಪುರ ಠಾಣೆ ಇನ್ಸ್​​​​​ಪೆಕ್ಟರ್ ಯಾಳಗಿ ಆರೋಪಿ ಮುಸ್ತಫಾ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಓರ್ವ ಎಎಸ್‌ಐ ಹಾಗೂ ಇಬ್ಬರು ಹೆಡ್‌ ಕಾನ್ಸ್​​​ಟೇಬಲ್‌ಗಳಿಗೆ ಗಾಯಗಳಾಗಿದ್ದು, ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗಾಯಾಳು ಆರೋಪಿ ಮಹ್ಮದ್ ಮುಸ್ತಫಾಗೆ ಜಿಲ್ಲಾಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆರೋಪಿಯು ಮಹ್ಮದ್ ಸುಲ್ತಾನ್ ಮಿರ್ಜಾ ಹೆಸರಿನ ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಹೊಂದಿದ್ದ ಎನ್ನಲಾಗಿದೆ. ನಕಲಿ ಪಾಸ್ ಪೋರ್ಟ್ ಬಳಸಿ ದೇಶದಿಂದ ಪರಾರಿಯಾಗಲು ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಆರೋಪಿ‌ ಮುಸ್ತಫಾ ಬಳಿಯ‌ ನಕಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೇ ಆರೋಪಿ ಪತ್ನಿ ಹೀನಾ ಮೇಲಿನ ದ್ವೇಷಕ್ಕೆ ಪತ್ನಿಯ ಅಣ್ಣ ಅಕ್ಬರ್ ಮನೆಗೆ ಜುಲೈ 4 ರಂದು ಬೆಂಕಿ ಹಚ್ಚಿದ್ದ, ಘಟನೆಯಲ್ಲಿ ಮನೆಯಲ್ಲಿದ್ದ ಅಕ್ಬರ್, ಅಕ್ಬರ್ ಪತ್ನಿ ಹಾಗೂ ಇಬ್ಬರು ಮಕ್ಕಳು‌ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅಕ್ಬರ್, ಪತ್ನಿ ಶಹನಾಜ್ ಬೇಗಂ, ಪುತ್ರಿ ಸಾನಿಯಾ‌ ಮೃತಪಟ್ಟಿದ್ದರು. ಸದ್ಯ ಸಾವು ಬದುಕಿನ‌ ಮಧ್ಯೆ ಹೋರಾಟ ನಡೆಸಿರುವ ಮೃತ ಅಕ್ಬರ್ ಪುತ್ರ ಯಾಸೀನ್​​ಗೆ ಮಹಾರಾಷ್ಟ್ರದ ಸಾಂಗ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ‌ ಮುಸ್ತಫಾನನ್ನು‌ ಮೊನ್ನೆ ರಾಜಸ್ಥಾನದ ಅಜ್ಮೇರ್​​​​​ನಲ್ಲಿ ಬಂಧಿಸಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv