ಸರ್ಕಾರಿ ಕೆಲಸ ಕೊಡಿಸ್ತೀವಿ ಅಂತಾ ಪೊಲೀಸರಿಂದಲೇ ಕೋಟಿ ಕೋಟಿ ವಂಚನೆ

ಬೆಂಗಳೂರು: ಕೆಪಿಎಸ್​ಸಿ, ಪಿಎಸ್ಐ, ಎಫ್​ಡಿಎ, ಎಸ್​ಡಿಎ ಸೇರಿದಂತೆ ಹಲವಾರು ಸರ್ಕಾರಿ ಹುದ್ದೆ ಕೊಡಿಸುವ ಆಮಿಷವೊಡ್ಡಿ ನೂರಾರು ಮಂದಿಗೆ ಪೊಲೀಸರೇ ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುವ ಐವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ.
ಬೆಂಗಳೂರಿನ ಕೇಂದ್ರ ವಿಭಾಗದ ಸಿಎಆರ್​ ಪೊಲೀಸ್​ ಪೇದೆಯಾಗಿ ಕೆಲಸ ಮಾಡುತ್ತಿರುವ ಲಕ್ಷ್ಮೀಕಾಂತ್, ಸಿಎಆರ್​ ಗನ್​ಮ್ಯಾನ್​ ಲೋಕೇಶ್​, ನೇಮಕಾತಿ ವಿಭಾಗದ ಸಿಬ್ಬಂದಿ ರಾಜೇಶ್​​, ನಾಗರಾಜ್​​ ಹಾಗೂ ಶಬಾನಾ ಬೇಗಂ ಪ್ರಕರಣದ ಪ್ರಮುಖ ಆರೋಪಿಗಳು. ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತಲೆಮರೆಸಿಕೊಂಡಿರುವ ಪ್ರಕರಣದ ಆರೋಪಿ ನಂಬರ್​ 1, ಲೋಕೇಶ್​​ಗಾಗಿ ಬಲೆ ಬೀಸಿದ್ದಾರೆ. ಅಲ್ಲದೇ, ಹಗರಣದ ಹಿಂದೆ ಇಲಾಖೆಯ ಓರ್ವ ಹಿರಿಯ ಅಧಿಕಾರಿಯೂ ಶಾಮೀಲಾಗಿರಬಹುದೆಂದು ಶಂಕಿಸಲಾಗಿದೆ.

ನಡೆದದ್ದೇನು..?

ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡುತ್ತಿದ್ದ ಲಕ್ಷ್ಮೀಕಾಂತ್​ ಹಾಗೂ ಲೋಕೇಶ್​​​, ಹಣವನ್ನು ತಮ್ಮ ಬಾಸ್​​ಗೆ ನೀಡಿದ್ದರು. ಬಾಸ್​ಗೆ ಹಣ ಕೊಟ್ಟಿದ್ದೇನೆ, ನಿಮ್ಮ ಕೆಲಸ ಆಗುತ್ತೆ ಎಂದು ಹಣ ಕೊಟ್ಟವರನ್ನು ಲಕ್ಷ್ಮೀಕಾಂತ್​ ನಂಬಿಸುತ್ತಿದ್ದ. ಹಣ ಪಡೆಯುತ್ತಿದ್ದ ಆ ಅಧಿಕಾರಿ ಯಾರು ಎಂಬ ಬಗ್ಗೆ ಇನ್ನೂ ತನಿಖೆಯಿಂದ ತಿಳಿಯಬೇಕಿದೆ. ಆ ಹಿರಿಯ ಅಧಿಕಾರಿಯ ಬಗ್ಗೆ ಲಕ್ಷ್ಮೀಕಾಂತ್​ ಯಾರ ಬಳಿಯೂ ಬಾಯ್ಬಿಟ್ಟಿಲ್ಲ.

ಆಸ್ತಿ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರೇ ಶಾಕ್

ಬಂಧಿತ ಪೇದೆ ಲಕ್ಷ್ಮಿಕಾಂತ್​ನಿಂದ ಆಸ್ತಿ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರೇ ಶಾಕ್​ ಆಗಿದ್ದಾರೆ. 2014ರಿಂದ 17ರವರೆಗೆ ಲಕ್ಷ್ಮೀಕಾಂತ್​ ಸಂಗ್ರಹಿಸಿರುವ ಹಣ ಮಾಡಿದ್ದು 18 ಕೋಟಿಗೂ ಹೆಚ್ಚು. ಎಲ್ಲಾ ಹಣ ವಂಚನೆಯಿಂದ ಸಂಪಾದಿಸಿದ್ದು ಎಂದು ಆತನೇ ಬಾಯ್ಬಿಟ್ಟಿದ್ದಾನೆ. ಈ ನಡುವೆ ತನ್ನ ಪತ್ನಿ ಮೂಲಕ ಆಸ್ತಿ ಮಾರಾಟ ಮಾಡಿಸಲು ಲಕ್ಷ್ಮೀಕಾಂತ್ ಯತ್ನಿಸಿದ್ದ. ವಿಷಯ ತಿಳಿದ ಸಿಸಿಬಿ ಪೊಲೀಸರು ಪ್ರಕರಣ ಇತ್ಯರ್ಥವಾಗುವ ತನಕ ಮಾರಾಟ ಮಾಡದಂತೆ ಕ್ರಮ ಕೈಗೊಂಡಿದ್ದಾರೆ.
ಸದ್ಯ, ಅರೆಸ್ಟ್​ ಆದ ವೇಳೆ ₹ 10 ಕೋಟಿ ಮೌಲ್ಯದ ಆಸ್ತಿಪಾಸ್ತಿ ಜಪ್ತಿ ಮಾಡಿದ್ದಾರೆ. ಅಕ್ರಮ ಆಸ್ತಿ ಜಪ್ತಿ ಮಾಡಿದ ಸಿಸಿಬಿ ಅಧಿಕಾರಿಗಳು, ಲಕ್ಷ್ಮೀಕಾಂತ್​ ಹಾಗೂ ಆತನ ಕುಟುಂಬಸ್ಥರ ಹೆಸರಲ್ಲಿನಲ್ಲಿದ್ದ ಬ್ಯಾಂಕ್ ಅಕೌಂಟ್‌ ಸೀಝ್​ ಮಾಡಿದ್ದಾರೆ. ಅಲ್ಲದೇ, ತನಿಖಾಧಿಕಾರಿಗಳು ಇತರ ಆರೋಪಿಗಳ ಆಸ್ತಿಯ ವಿವರ ಕಲೆ ಹಾಕುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv