ವಿದ್ಯಾರ್ಥಿಗಳ ಮೇಲೆ ಖಾಕಿ ಪ್ರತಾಪ, ಎಳೆದು ಎಳೆದು ಬಡಿದ ಪೊಲೀಸರು..!

ತುಮಕೂರು: ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ತೀವ್ರಗೊಂಡಿತ್ತು. ಈ ವೇಳೆ ಪ್ರತಿಭಟನೆಯನ್ನ ನಿಯಂತ್ರಿಸಲು ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಉಚಿತ ಬಸ್​ ಪಾಸ್​ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ವೇಳೆ ಪೊಲೀಸರು ಸ್ಥಳಕ್ಕೆ ಎಂಟ್ರಿ ನೀಡಿದ್ದಾರೆ. ಆಗ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಇದರಿಂದ ಕೆರಳಿದ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಧಿಕ್ಕಾಪಾಲಾಗಿ ಓಡಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿದ್ಯಾರ್ಥಿಗಳನ್ನ ಬೆನ್ನತ್ತಿ ಪೊಲೀಸರು ಲಾಠಿ ಏಟು ನೀಡಿದ್ದಾರೆ.
ಅಲ್ಲದೇ ಓರ್ವ ವಿದ್ಯಾರ್ಥಿ ಒಬ್ಬ ಪೊಲೀಸರ ಲತ್ತೆಯನ್ನ ತಪ್ಪಿಸಿಕೊಳ್ಳಲು ನಿಂತಿದ್ದ ಬಸ್ಸಿನಡಿ ಹೊಕ್ಕಿದ್ದಾನೆ. ಅಷ್ಟಕ್ಕೂ ಸುಮ್ಮನಿರದ ಪೊಲೀಸರು, ಆ ವಿದ್ಯಾರ್ಥಿಯನ್ನ ಹಿಡಿದು ಹೊರಗೆ ಎಳೆದು ತಂದು ಲಾಠಿ ರುಚಿ ತೋರಿಸಿದ್ದಾರೆ. ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಈ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ. ಅಲ್ಲದೇ ವಿದ್ಯಾರ್ಥಿಗಳನ್ನ ಬೆನ್ನಟ್ಟಿ ಹೊಡೆಯುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com