ಮಕ್ಕಳ ಕಳ್ಳರೆಂದು ಭಾವಿಸಿ ಐವರ ಭಿಕ್ಷುಕಿಯರ ಬಂಧನ

ಹುಬ್ಬಳ್ಳಿ: ಮಕ್ಕಳ ಕಳ್ಳರೆಂದು ಭಾವಿಸಿ ರಾಜಸ್ತಾನ ಮೂಲದ ಐದು ಭಿಕ್ಷುಕಿಯರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹೆಗ್ಗೇರಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶೇಲಾ, ಸಂಗೀತಾ, ಕೋಮಲಾ, ಧನ್ಯಾರಾವ್, ಕಿರಣ ಬಂಧಿತರು. ರೇಲ್ವೆ ನಿಲ್ದಾಣದ ಹತ್ತಿರ ವಾಸಕ್ಕೆ ತಾತ್ಕಾಲಿಕ ಶೆಡ್ ಹಾಕಿಕೊಂಡಿದ್ದರು. ಇವರಿಗೆ ಕನ್ನಡ ಸರಿಯಾಗಿ ಬರದಿದ್ದಕ್ಕೆ ಸ್ಥಳೀಯರು ಅನುಮಾನಗೊಂಡು ವಿದ್ಯುತ್​ ಕಂಬಕ್ಕೆ ಕಟ್ಟಿ ಹಾಕಲು ಮುಂದಾಗಿದ್ದರು. ಈ ಮಾಹಿತಿ ತಿಳಿದ ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಕಟ್ಟಿ ಹಾಕುವುದನ್ನು ತಪ್ಪಿಸಿ, ವಿಚಾರಣೆ ನಡೆಸಿದಾಗ ರಮ್ಜಾನ್​ ಹಬ್ಬದ ಪ್ರಯುಕ್ತ ಭಿಕ್ಷಾಟನೆಗೆ ಬಂದಿರುವುದಾಗಿ ಹೇಳಿದ್ದಾರೆ. ಸೆಕ್ಷೆನ್​ 110ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.