ಕರ್ನಾಟಕದಲ್ಲಿ ಬರೀ ಅಲೆ ಅಲ್ಲ. ಬಿರುಗಾಳಿಯೇ ಎದ್ದುಬಿಟ್ಟಿದೆ: ಪ್ರಧಾನಿ ಮೋದಿ

ಸಂತೇಮರಳ್ಳಿ: ಮೈಸೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11.30ಕ್ಕೆ ಅಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್​ ಮೂಲಕ ಚಾಮರಾಜ ನಗರ ಜಿಲ್ಲೆಯ ಸಂತೇಮರಳ್ಳಿಯ ಸಮಾವೇಶದಲ್ಲಿ ಪಾಲ್ಗೊಂಡು ಅಬ್ಬರಿಸಿದ್ದಾರೆ. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಕರ್ನಾಟಕದಲ್ಲಿ ಬರೀ ಅಲೆ ಅಲ್ಲ. ಬಿರುಗಾಳಿಯೇ ಎದ್ದುಬಿಟ್ಟಿದೆ. ಮೇ 1-ಮೂರು ವರ್ಷಗಳ ಹಿಂದೆ ನಾನು ಕೆಂಪುಕೋಟೆಯಲ್ಲಿ ಘೋಷಣೆ ಮಾಡಿದ್ದಂತೆ ನಾನು ಗ್ರಾಮ ಗ್ರಾಮಗಳಲ್ಲಿ ವಿದ್ಯುತ್​ ಕೊಡುವಂತಹ ಕೆಲಸವನ್ನು ಸಂಪೂರ್ಣಗೊಳಿಸಿದ್ದೇನೆ. ಅಸ್ಸಾಂನ ಕೊನೆಯ ಹಳ್ಳಿಗೂ ವಿದ್ಯುತ್​ ಕಲ್ಪಿಸಲಾಗಿದೆ. ಇದರೊಂದಿಗೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್​ ನೀಡಿದ್ದೇನೆ ಎಂದು ತಿಳಿಸಿದ್ರು. ಪ್ರಧಾನಿ ಮೋದಿ ಮತ್ತೇನು ಮಾತಾಡಿದ್ರು ಅವರ ಮಾತಲ್ಲೇ ಇದೆ ನೀವೇ ಓದಿ…

ಆಡಬಾರದು ಮಾತು ಆಡುತ್ತಿರುವ ರಾಹುಲ್..!
ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರು ಅತ್ಯುತ್ಸಾಹದಲ್ಲಿ ಆಡಬಾರದ ಮಾತುಗಳನ್ನು ಆಡುತ್ತಿದ್ದಾರೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ನೀಡುವುದು ಕಡಿಮೆ ಮಾತಲ್ಲ. ಇದನ್ನು ಸಾಕಾರಗೊಳಿಸಿದ ಕಾರ್ಮಿಕರಿಗೆ ಶಹಬ್ಬಾಸ್​ ಹೇಳುವುದನ್ನು ಬಿಟ್ಟು, ಕೊಂಕು ತೆಗೆದಿದ್ದಾರೆ. ಅವರು ಕೆಲಸಗಾರ ಅಲ್ಲ ಬರೀ ಹೆಸರಿಗಷ್ಟೇ, ಮಾತಿಗಷ್ಟೇ ಇರುವಂತಹವರು. ​ಸ್ವಾತಂತ್ರ್ಯೋತ್ಸವ ನಂತರದ 70 ವರ್ಷಗಳಲ್ಲಿಯೂ ಇನ್ನೂ ಎಲ್ಲ ಹಳ್ಳಿಗಳಿಗೆ ಯಾಕೆ ವಿದ್ಯುತ್​ ತಲುಪಲಿಲ್ಲ? ಕಾಂಗ್ರೆಸ್ ಪಕ್ಷ ಏನು ಮಾಡುತ್ತಿತ್ತು? ಸುಮ್ಮನೇ ಮಾತನಾಡುವುದಲ್ಲ. ಇನ್ನೂ 4 ಸಾವಿರ ಕೋಟಿ ಕುಟುಂಬಗಳಿಗೆ ವಿದ್ಯುತ್​ ತಲುಪಿಲ್ಲ. ಆದರೆ ಅಷ್ಟೂ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ತಲುಪಿಸುವ ಜವಾಬ್ದಾರಿ ನನ್ನದು.

ನಮ್ಮ ಲೆಕ್ಕ ಕೇಳುತ್ತಿದ್ದಾರೆ ಕಾಂಗ್ರೆಸ್ಸಿನವರು..!
ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ 2005ರಲ್ಲಿ ಮನಮೋಹನ್​ ಸಿಂಗ್​ ಅವರು ಪ್ರಧಾನಿಯಾಗಿದ್ದಾಗ ದೇಶದ ಅಷ್ಟೂ ಗ್ರಾಮಗಳಿಗೆ ವಿದ್ಯುತ್​ ನೀಡುತ್ತೇವೆ ಎಂದು ವಾಗ್ದಾನ ನೀಡಿದ್ದರು. ಅವರು ಅದನ್ನು ಪೂರ್ಣಗೊಳಿಸಿದ್ದರೆ ನಾವೇಕೆ ಆ ಕಾರ್ಯಕ್ಕೆ ಇಂದು ಕೈಹಾಕುತ್ತಿದ್ದೆವು? ಅವರಿಂದ ಯಾಕೆ ಸಾಧ್ಯವಾಗಲಿಲ್ಲ? 2014ರಲ್ಲಿ ಬಂದ ನಮ್ಮಿಂದ ಯಾಕೆ ಸಾಧ್ಯವಾಯಿತು? ಇದು ಸಾಧ್ಯವಾಗಿದ್ದು ಕಾರ್ಮಿಕರಿಂದಾಗಿ. ಅಂತಹ ಕಾರ್ಮಿಕರನ್ನು ಕಾಂಗ್ರೆಸ್ಸಿನವರು ಲೇವಡಿ ಮಾಡುತ್ತಾರೆ. ಜನ ಅರ್ಥ ಮಾಡಿಕೊಳ್ಳಬೇಕು.
ನಾನು ಸ್ವಲ್ಪ ಕರ್ನಾಟಕ ರಾಜ್ಯದ ಬಗ್ಗೆ ಮಾತನಾಡಬೇಕು. ಮಾತನಾಡಬಹುದಾ? ನೀವು ಅಪ್ಪಣೆ ಕೊಡುತ್ತೀರಾ? ಏನಂದರೆ 2013ರಲ್ಲಿ ರಾಜ್ಯದಲ್ಲಿ 39 ಹಳ್ಳಿಗಳಿಗೆ ವಿದ್ಯುತ್​ ತಲುಪಿರಲಿಲ್ಲ. ಆದರೆ ನಮ್ಮ ಕೇಂದ್ರ ಸರಕಾರದ ಯೋಜನೆಯಿಂದಾಗಿ ಅಲ್ಲೀಗ ಬೆಳಕು ಕಂಡಿದೆ. ಆದರೆ ಕಾಂಗ್ರೆಸ್ ಸರಕಾರ ಅದನ್ನು ಯಾಕೆ ಮಾಡಿರಲಿಲ್ಲ. ನಮ್ಮನ್ನು ಲೆಕ್ಕ ಕೇಳುತ್ತಿದ್ದಾರೆ ಕಾಂಗ್ರೆಸ್ಸಿನವರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv