‘ಕಣ್ಣಲ್ಲಿ ಕಣ್ಣಿಟ್ಟು ನಾನು ನೋಡುವುದಿಲ್ಲ, ಆದ್ರೆ ಇಡೀ ದೇಶ ಇಂದು ನಿಮ್ಮ ಕಣ್ಣಾಟ ನೋಡಿದೆ..!’

ನವದೆಹಲಿ: ತಮ್ಮ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡಿದರು.
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ, ಸಾಹಸ ನನಗೆ ಇಲ್ಲ ಎಂದು ಬೆಳಗ್ಗೆಯಷ್ಟೇ ಹೇಳಿದಿರಿ. ಹೌದು ನಾನು ಆ ರೀತಿ ನೋಡುವುದಿಲ್ಲ. ಏಕೆಂದರೆ ನೀವು ನಾಮ್​ದಾರ್​, ನಾನು ಕಾಮ್​ದಾರ್​ ಎಂದು ರಾಹುಲ್​​ ಗಾಂಧಿಗೆ ಮೋದಿ ತಿರುಗೇಟು ನೀಡಿದರು.
ಇಡೀ ದೇಶ ಇಂದು ನಿಮ್ಮ ಕಣ್ಣುಗಳನ್ನು ನೋಡಿದೆ. ಪ್ರತಿಯೊಬ್ಬರ ದೃಷ್ಟಿಯಲ್ಲೂ ಅದು ಸ್ಪಷ್ಟವಾಗಿದೆ. ಇಡೀ ದೇಶ ಟಿವಿಯಲ್ಲಿ ನಿಮ್ಮ ಕಣ್ಣಾಟವನ್ನು ಕಂಡಿದೆ. ಕಣ್ಣುಗಳನ್ನು ಹೇಗೆ ತೆರೆಯುವುದು-ಹೇಗೆ ಮುಚ್ಚುವುದು ಎಂಬುದನ್ನು ಜನ ನೋಡಿದ್ದಾರೆ ಬಿಡಿ ಎಂದು ರಾಹುಲ್​ ಗಾಂಧಿ ಕಣ್ಣು ಮಿಟುಕಿಸುವುದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ನಿಮ್ಮ ಕಣ್ಣಲ್ಲಿ ಕಣ್ಣಿಟ್ಟ, ನಿಮ್ಮ ಜೊತೆ ಕೈಜೋಡಿಸಿದ ಚರಣ್​ ಸಿಂಗ್​ಜೀ, ಚಂದ್ರಶೇಖರ್​ಜೀ, ದೇವೇಗೌಡಜೀ, ಗುಜ್ರಾಲ್​ಜೀ ಅವರುಗಳಿಗೆ ನೀವು ಏನು ಮಾಡಿದಿರಿ? ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಂತಹುದರಲ್ಲಿ ನಾನು ಹೇಗೆತಾನೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಎಂದು ಕಾಂಗ್ರೆಸ್​ ಬಗ್ಗೆ ಮೋದಿ ವ್ಯಂಗ್ಯವಾಡಿದರು.
ಸದ್ಯ ಲೋಕಸಭೆಯಲ್ಲಿ 536 ಸದಸ್ಯರ ಬಲವಿದ್ದು, ಸರ್ಕಾರ ಉಳಿಸಿಕೊಳ್ಳಲು ಪ್ರಧಾನಿಗೆ 249 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಮ್ಯಾಜಿಕ್ ನಂಬರ್ ಪಡೆಯೋ ವಿಶ್ವಾಸದಲ್ಲಿ ಪ್ರಧಾನಿಯಿದ್ದಾರೆ. ಸದ್ಯ ಸರ್ಕಾರದ ಪರವಾಗಿ 331 ಸದಸ್ಯ ಬಲವಿದ್ದರೆ, ಸರ್ಕಾರದ ವಿರುದ್ಧ 154 ಸದಸ್ಯ ಬಲವಿದೆ. ಇನ್ನೂ 11 ಮಂದಿ ತಟಸ್ಥರಾಗಿದ್ದಾರೆ. ಹೀಗಾಗಿ ವಿಶ್ವಾಸ ಗಳಿಸುವ ನಂಬಿಕೆಯಲ್ಲಿದ್ದಾರೆ ಮೋದಿ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv