ದೇಶಕ್ಕೆ ಲೋಕತಂತ್ರವನ್ನ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತೆ: ಪ್ರಧಾನಿ ಮೋದಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು, ರಾಜ್ಯದ ಐದು ಜಿಲ್ಲೆಗಳ ಕಾರ್ಯಕರ್ತರೊಂದಿಗೆ ನಮೋ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಬೀದರ್​​, ಹಾವೇರಿ, ದಾವಣಗೆರೆ, ಬೆಳಗಾವಿ, ಧಾರವಾಡ ಜಿಲ್ಲೆಯ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ.

ದಾವಣಗೆರೆ: ನಗರದ ಹೊಳೆಹೊನ್ನೂರುತೋಟದಲ್ಲಿ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿಯವರಿಗೆ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ್ ಪ್ರಶ್ನೆ ಕೇಳಿದರು. ಭಾರತದ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಎಷ್ಟು ಮಹತ್ವದ್ದಾಗಿದೆ? ಜೊತೆಗೆ, ತಾವು ಕೈಗೊಂಡ ಕ್ರಮಗಳ ಬಗ್ಗೆ ಹೇಳಿ ಎಂದು ಶಂಕರಗೌಡ ಪಾಟೀಲ್ ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಧಾನಿ ದೇಶದಲ್ಲಿ ಶೇ. 45 ರಷ್ಟು ಪ್ರವಾಸಿಗರ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿದೆ. ಈ ಹಿಂದೆ ಭಾರತ 52ನೇ ಸ್ಥಾನದಲ್ಲಿ ಇತ್ತು. ಈಗ ಪ್ರವಾಸೋದ್ಯಮದಲ್ಲಿ ಜಗತ್ತಿನಲ್ಲಿಯೇ 14ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಬೂತ್​ ಮಟ್ಟದ ಕಾರ್ಯಕರ್ತರು ಸಂವಾದದಲ್ಲಿ ಭಾಗಿಯಾಗಿದ್ದರು. ಹಾನಗಲ್​​ನ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕರ್ತ ಜಗನ್ನಾಥ ಬಾಂಡಗೆ ಜೊತೆ ಸಂವಾದ ನಡೆಸಿದರು. ನಾಲ್ಕೂವರೆ ವರ್ಷದಲ್ಲಿ ದೇಶದ ಯುವಜನತೆಗಾಗಿ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ? ಎಂದು ಜಗನ್ನಾಥ ಬಾಂಗಡೆ ಕೇಳಿದರು. ಪ್ರಧಾನಿ ಮೋದಿ ಸ್ಟಾರ್ಟ್​​ ಅಪ್ ಇಂಡಿಯಾ, ಸಿಕ್ಸ್ ಲೈನ್ ಹೆದ್ದಾರಿ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದೇವೆ ಎಂದು ಹೇಳಿದ್ದಾರೆ.

ಬೀದರ್: ನಗರದ ಐಎಮ್ಎ ಹಾಲ್​​ನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಸಂವಾದದಲ್ಲಿ ಜಿಲ್ಲೆಯ ಬಸವಕಲ್ಯಾಣ ಬೂತ್​​ಮಟ್ಟದ ಕಾರ್ಯಕರ್ತ ಶಿವಪುತ್ರಪ್ಪ ಗೌರ್ ಪ್ರಧಾನಿಗೆ ಸಣ್ಣ ಕೈಗಾರಿಕೆ ಉತ್ಯೇಜನದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ ಮಧ್ಯಮ ವರ್ಗದವರಿಗೆ ಮತ್ತು ಹೊಸ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರದ ಮುದ್ರಾ ಯೋಜನೆ ಇದೆ. ಅದ್ರಲ್ಲಿ ಜನರಿಗೆ ಸಾಲ ನೀಡಲಾಗುತ್ತೆ. ಇದರಿಂದ ಕೆಳಮಟ್ಟದಿಂದ ಉದ್ಯಮ ಬೆಳೆಯಲು ಸಾಧ್ಯ. ಜೊತೆಗೆ ದೇಶವು ಇದರಿಂದ ಆರ್ಥಿಕವಾಗಿ ಸಬಲವಾಗುತ್ತೆ.

ಆದ್ದರಿಂದ ನೀವು ಮನೆ ಮನೆಗೆ ತೆರಳಿ ಮುದ್ರಾಯೋಜನೆ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಉತ್ತರಿಸಿದರು. ಅಲ್ಲದೇ ಬಸವಣ್ಣನ ಕರ್ಮಭೂಮಿಯಲ್ಲಿ ಜನಿಸಿದ ನೀವು ಭಾಗ್ಯಶಾಲಿಗಳು. ದೇಶಕ್ಕೆ ಲೋಕತಂತ್ರದ ಕೊಡುಗೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತೆ. ಅವರು ಸಮಾನತೆಗಾಗಿ ಹೋರಾಟ ನಡೆಸಿದ್ದರ ಬಗ್ಗೆ ವಿದೇಶದಲ್ಲಿ ಜನರಿಗೆ ತಿಳಿಸಿದ್ರೆ ಅಚ್ಚರಿ ಪಡುತ್ತಾರೆ ಎಂದು ಬಸವಣ್ಣನವರನ್ನ ಹಾಡಿಹೊಗಳಿದರು. ಇನ್ನ, ಈ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ, ಮೇರಾ ಬೂತ್ ಸಬ್​​ಸೇ ಮಜಬೂತ್ ಅನ್ನೋ ಘೋಷ ವಾಕ್ಯ ನೀಡಿದರು.

ಧಾರವಾಡ: ನಗರದ ಅಂಬರಾಯಿ ಗಾರ್ಡನ್​ನಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದರು. ಸಂವಾದದಲ್ಲಿ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ನೂರಾರು ಕಾರ್ಯಕರ್ತರು ಸಂವಾದದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಜನತಾ ಪಾರ್ಟಿಯ ಹುಬ್ಬಳ್ಳಿ-ಧಾರವಾಡ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಬಿಜೆಪಿ ಕಾರ್ಯಕರ್ತೆ ರಾಧಾ ದೇಸಾಯಿ ಜಿಲ್ಲೆಗೆ ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಧಾನಿಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv