ನೇಷನ್​ ಫಸ್ಟಾ ಅಥವಾ ಫ್ಯಾಮಿಲಿ ಫಸ್ಟಾ? ದೇವೇಗೌಡರು ಇದಕ್ಕೆ ಉತ್ತರಿಸಲಿ! -ಪ್ರಧಾನಿ ಮೋದಿ

ಕೊಪ್ಪಳ: ಕರ್ನಾಟಕದ ಮುಖ್ಯಮಂತ್ರಿ ನನ್ನ ಬಗ್ಗೆ ಹೇಳಿರುವ ಮಾತನ್ನು ಕೇಳಿದ್ದೇನೆ. ನಾನು ಮತ್ತೆ ಪ್ರಧಾನ ಮಂತ್ರಿಯಾದ್ರೆ ಅವರು ರಾಜಕೀಯದಿಂದ ಸನ್ಯಾಸತ್ವ ತೆಗೆದುಕೊಳ್ಳುತ್ತಾರಂತೆ!  ಎಂದು ಮಾತಿಗಿಳಿದ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಕುಮಾರಸ್ವಾಮಿ ಹಾಗೆ ಹೇಳುವುದಕ್ಕೂ ಮುನ್ನ ಅವರ ಅಪ್ಪ ದೇವೇಗೌಡರು ಸಹ ಸರಿಯಾಗಿ 5 ವರ್ಷಗಳ ಹಿಂದೆ ಇದೇ ಮಾತನ್ನು ಹೇಳಿದ್ದರಲ್ವಾ? ಅವರೇನು ರಾಜಕೀಯ ನಿವೃತ್ತಿ ತೆಗೆದುಕೊಂಡ್ರಾ? ಅವರ ಪುತ್ರ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರಾ? ಇಲ್ಲಾ! ಬದಲಿಗೆ ಅವರು ಮಾಡುತ್ತಿರುವುದಾದರೂ ಏನು.. ಕುಟುಂಬದ ಎಲ್ಲರಿಗೂ ಟಿಕೆಟ್ ಕೊಡುತ್ತಿದ್ದಾರೆ! ಅಂಥಾದ್ದರಲ್ಲಿ ರಾಜಕೀಯದಿಂದ ಗೌಡರ ಕುಟುಂಬದವರು ಸನ್ಯಾಸ ತೆಗೆದುಕೊಳ್ಳುವ ಮಾತೆಲ್ಲಿ? ನೇಷನ್​ ಫಸ್ಟಾ ಅಥವಾ ಫ್ಯಾಮಿಲಿ ಫಸ್ಟಾ? ಎಂಬುದನ್ನು ಗೌಡರ ಕುಟುಂಬ ಫಸ್ಟ್ ಸ್ಪಷ್ಟಪಡಿಸಲಿ ಎಂದು ಪ್ರಧಾನಿ ಮೋದಿ ಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.

ಲೋಕಸಭಾ ಚುನಾವಣೆ ಅಂಗವಾಗಿ ಕೊಪ್ಪಳ ಸುತ್ತಮುತ್ತಲ ಮೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಗೆ ಆಗಮಿಸಿದ್ದಾರೆ.