ಬೆರಕೆ ಸರ್ಕಾರ ಕರ್ನಾಟಕವನ್ನ ಬರ್ಬಾದ್​ ಮಾಡಿದೆ, ಇದಕ್ಕೆ ಮತ್ತೆ ಅವಕಾಶ ಕೊಡಬೇಡಿ- ಮೋದಿ

ಬೆಂಗಳೂರು: ಲೋಕಸಭಾ ಚುನಾವಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್​ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಮಾಡ್ರನ್​ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ನಮನ ಎಂದು ಮಾತು ಆರಂಭಿಸಿದ ಪ್ರಧಾನಿ ಮೋದಿ, ನನ್ನ ಸಹೋದ್ಯೋಗಿಗಳ ಬಗ್ಗೆ ಮಾತನಾಡಲೇ ಬೇಕು ಎಂದು ಅನಂತ ಕುಮಾರ್​, ವಿಜಯ್​ ಕುಮಾರ್​ ಅವರನ್ನು ಸ್ಮರಿಸಿದರು. ಅವರಿಗೆ ನನ್ನ ಶ್ರದ್ಧಾಂಜಲಿ. ಅವರಿಬ್ಬರು ಇಲ್ಲಾ ಅನ್ನೋದು ನನ್ನನ್ನ ಕಾಡುತ್ತಲೇ ಇದೆ. ಇಂದು ರಾಮನವಮಿಯ ಪವಿತ್ರ ಹಬ್ಬ. ನಾಳೆ 14 ಏಪ್ರಿಲ್ ಅಂಬೇಡ್ಕರ್​ ಜಯಂತಿ. ಅಂಬೇಡ್ಕರ್​ಗೆ ನನ್ನ ಶ್ರದ್ಧಾಂಜಲಿ. ಬೆಂಗಳೂರಿನ ಜನ ನನಗೆ ಎಷ್ಟೊಂದು ಪ್ರೀತಿ ನೀಡುತ್ತಿದ್ದೀರಾ.. ನಿಮಗೆ ನನ್ನ ನಮಸ್ಕಾರಗಳು ಎಂದು ಹೇಳಿದರು.

ಕೇಂದ್ರದಲ್ಲಿ ಮಹಾಮಿಲಾವಟ್​ನ ರಿಮೋಟ್​ ಕಂಟ್ರೋಲ್​ ಸರ್ಕಾರ ಇದ್ದಾಗ ಬಾಂಬ್​ ಸ್ಫೋಟ ನಡೆದಿತ್ತು. ಇಂದು ನಾನು ಮಾಡಿರೋದೆಲ್ಲಾ ನಿಮ್ಮ ಸಹಾಯದಿಂದ ಆಗಿದ್ದು. ದೇಶದಲ್ಲಿ ಬದಲಾವಣೆ ಹೇಗೆ ಆಗುತ್ತಿದೆ ಅನ್ನೋದನ್ನ ಕಲ್ಪನೆ ಮಾಡೋದಕ್ಕೂ ಆಗುತ್ತಿಲ್ಲಾ. ನಾನು 2014 ರಲ್ಲಿ ನೀವು ಕೊಟ್ಟಿದ್ದ ಆದೇಶವನ್ನು ಜವಾಬ್ದಾರಿಯಿಂದ ಪೂರೈಸಿದ್ದೇನೆ. ಕಳೆದ ಬಾರಿಯ ನಿಮ್ಮ ವೋಟ್​ನ ತಾಕತ್ತಿನಿಂದ ಬೆಂಗಳೂರು ಇಂದು ಸುರಕ್ಷಿತವಾಗಿದೆ. ಇಲ್ಲಿನ ಮಿಲಾವಟಿ ಸರ್ಕಾರ ನೋಡಿದ್ರೆ ಕರ್ನಾಟಕವನ್ನ ಹೇಗೆ ಬರ್ಬಾದ್​ ಮಾಡಿದೆ ಅಂತಾ ಗೊತ್ತಾಗುತ್ತದೆ. ಇದಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಡಿ. ಅದಕ್ಕೆ, ಮತ್ತೆ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ ಎಂದು ಪ್ರಧಾನಿ ಮೋದಿ ಕೋರಿದರು.