ಮೋದಿ ರಾಜಧರ್ಮ ಪಾಲನೆ ಮಾಡಿಲ್ಲ: ಚಂದ್ರಬಾಬು ನಾಯ್ಡು ಕಿಡಿ

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಆಗ್ರಹಿಸಿ ಸಿಎಂ ಚಂದ್ರಬಾಬು ನಾಯ್ಡು ಇಂದು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಆಂಧ್ರಪ್ರದೇಶದಲ್ಲಿ ಱಲಿ ನಡೆಸಿದ್ದ ಪ್ರಧಾನಿ ಮೋದಿ, ರಾಜಕೀಯ ಸಮಾವೇಶಗಳಿಗೆ ಸಾರ್ವಜನಿಕರ ಹಣ ವೇಸ್ಟ್​ ಮಾಡ್ತಿದ್ದಾರೆ ಎಂದು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಇಂದು ತಿರುಗೇಟು ನೀಡಿದ ನಾಯ್ಡು, ಮಾಜಿ ಪ್ರಧಾನಿ ಅಟಲ್​​ ಬಿಹಾರಿ ವಾಜಪೇಯಿ, 2002ರ ದಂಗೆ ವೇಳೆ ಗುಜರಾತ್​ನಲ್ಲಿ ರಾಜಧರ್ಮ ಪಾಲನೆಯಾಗುತ್ತಿಲ್ಲ ಎಂದು ಹೇಳಿದ್ದರು. ಈಗ ಆಂಧ್ರಪ್ರದೇಶದ ವಿಷಯದಲ್ಲೂ ರಾಜಧರ್ಮ ಪಾಲನೆಯಾಗುತ್ತಿಲ್ಲ. ನಮ್ಮ ಹಕ್ಕನ್ನು ನಮಗೆ ಕೊಡ್ತಿಲ್ಲ. ನೀವು ನೀಡದಿದ್ದರೆ, ಹೇಗೆ ಪಡೆದುಕೊಳ್ಳಬೇಕು ಅನ್ನೋದು ನಮಗೆ ಗೊತ್ತು ಎಂದು ಹರಿಹಾಯ್ದರು.

ಇಂದು ಬೆಳಗ್ಗೆ 8.30ರ ಸುಮಾರಿಗೆ ರಾಜ್​​​ಘಾಟ್​​ನಲ್ಲಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ನಮಸ್ಕರಿಸಿದ ನಂತರ ಆಂಧ್ರಪ್ರದೇಶ ಭವನದಲ್ಲಿ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ಆರಂಭಿಸಿದ್ರು. ಕಾಂಗ್ರೆಸ್​​ ಮುಖ್ಯಸ್ಥ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​​, ನ್ಯಾಷನಲ್​ ಕಾನ್ಫರೆನ್ಸ್​ ಮುಖಂಡ ಫಾರೂಖ್​​ ಅಬ್ದುಲ್ಲಾ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​​ ಹಾಗೂ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.