ಸ್ವಚ್ಛತೆಯೇ ದೈವತ್ವ.. ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬ್ಯಾನ್​..!

ಸ್ವಚ್ಛತೆಯೇ ದೈವತ್ವ ಎಂಬ ನುಡಿಯಂತೆ ಧಾರ್ಮಿಕ ದತ್ತಿ ಇಲಾಖೆ ಸ್ವಚ್ಛ ಮಂದಿರ ಅಭಿಯಾನದ ಅಡಿ ದೇವಾಲಯಗಳಲ್ಲಿ ಪ್ಲಾಸ್ಟಿಕ್​ ಚೀಲಗಳನ್ನು ಬಳಸದಂತೆ ನಿಷೇದಿಸಲು ಮುಂದಾಗಿದೆ. ಈ ಹಿಂದೆ 2014 ಮತ್ತು 2015ರಲ್ಲಿ ಈ ಬಗ್ಗೆ ಸುತ್ತೊಲೆಗಳನ್ನು ಹೊರಡಿಸಿತ್ತು, ಆದ್ರೆ ಪ್ಲಾಸ್ಟಿಕ್ ಚೀಲಗಳ ಬಳಕೆ ಮಾತ್ರ ಕಡಿಮೆಯಾಗಿರಲಿಲ್ಲ. ಏಪ್ರಿಲ್​ 5ನೇ ತಾರೀಖು ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ನಿವೃತ್ತ ನ್ಯಾ. ಸುಭಾಷ್​ ಬಿ. ಅಡಿ ಯವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ 3ನೇ ರಾಜ್ಯ ಮಟ್ಟದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇವಾಲಯದ ಗುಡ್ಡದಲ್ಲಿ ಅಧಿಕ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದು ಮುಜರಾಯಿ ದೇವಾಲಯಗಳನ್ನ ಪರಿಶಿಲನೆ ನಡೆಸುವ ವೇಳೆ ಗಮನಿಸಿದ ತಂಡ, ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಚೀಲಗಳ ನಿಷೇದಕ್ಕೆ ಕ್ರಮ ಕೈಗೊಂಡಿದೆ. ಅದಲ್ಲದೇ ದೇವಾಲಯದ ಪ್ರವೇಶ ದ್ವಾರದಲ್ಲಿಯೇ ಪ್ಲಾಸ್ಟಿಕ್ ಚೀಲ ದೊಂದಿಗೆ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲು ಇಲಾಖೆ ಮುಂದಾಗಿದೆ. ಇನ್ಮೇಲೆ ಪ್ಲಾಸ್ಟಿಕ್ ಚೀಲ ಹಿಡ್ಕೊಂಡು ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದರೆ ದೇವರ ದರ್ಶನದ ಭಾಗ್ಯ ನಿಮಗೆ ಸಿಗಲ್ಲ ಬದಲಾಗಿ ದಂಡ ವಿಧಿಸಲಾಗುತ್ತೆ.

ಸಾಮಾನ್ಯವಾಗಿ ದೇವಾಲಯಗಳಿಗೆ ತೆರಳುವ ಭಕ್ತರು ದೇವಾಲಯದ ಬಳಿ ಹಣ್ಣು, ಹೂವು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೊಗ್ತಾರೆ. ಇದರಿಂದ ಪರಿಸರ ಹಾಗೂ ದೇವಾಲಯದ ಆವರಣಗಳ ಸ್ವಚ್ಛತೆಯ ದೃಷ್ಠಿಯಿಂದ ಈ ನಿರ್ಧಾರವನ್ನು ಧಾರ್ಮಿಕ ದತ್ತಿ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಇಂದೆ ಈ ಸುತ್ತೋಲೆಯನ್ನು ಎಲ್ಲಾ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ರವಾನಿಸಲಾಗಿದೆ.

ಸ್ವಚ್ಛಮಂದಿರ ಅಭಿಯಾನದಲ್ಲಿ ಕೆಳಕಂಡ ಅಂಶಗಳು ಪ್ರಧಾನವಾಗಿವೆ

  1. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳನ್ನು ಪ್ಲಾಸ್ಟಿಕ್​ ಮುಕ್ತ ದೇವಾಲಯಗಳನ್ನಾಗಿಸುವುದು. ದೇವಾಲಯದಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯವನ್ನು ದೇವಾಲಯ ಮಟ್ಟದಲ್ಲಿ ಸ್ವಯಂ ನಿರ್ವಹಣೆ ಮತ್ತು ಸ್ವಯಂ ವಿಲೇವಾರಿ ಮಾಡುವುದು. ಭಕ್ತಾದಿಗಳ ಅನುಕೂಲಕ್ಕಾಗಿ ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳನ್ನು ಬಳಸುವುದನ್ನ ಕಡ್ಡಾಯಗೊಳಿಸುವುದು.
  2. ದೇವಾಲಯದ ಸುತ್ತಮುತ್ತಲ ಪರಿಸರದಲ್ಲಿ ಪ್ಲಾಸ್ಟಿಕ್​ ಬಳಕೆಯಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸುವುದು. ದೇವಾಲಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ತರುವ ಭಕ್ತರಿಗೆ ₹ 10 ದಂಡ ಮತ್ತು ದೇವಾಲಯಗಳ ಬಳಿ ಪ್ಲಾಸ್ಟಿಕ್ ಚೀಲ ಬಳಸಿ ಪೂಜಾ ಸಾಮಗ್ರಿಗಳನ್ನು ಮಾರುವ ಅಂಗಡಿ ವ್ಯಾಪಾರಿಗಳಿಗೆ ₹ 500 ದಂಡ ವಿಧಿಸಲು ಇಲಾಖೆ ಮುಂದಾಗಿದೆ.
  3. ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ಲಾಸ್ಟಿಕ್​ ಬಳಸದಂತೆ ಕನ್ನಡ ಅಥವಾ ಇಂಗ್ಲಿಷ್​ ಭಾಷೆಗಳಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣುವಂತೆ ಸೂಚನಾ ಫಲಕಗಳಂತೆ ಅಳವಡಿಸುವುದು. ದೇವಾಲಯಕ್ಕೆ ಸೇರಿದ ಮತ್ತು ಸುತ್ತಮುತ್ತಲ ಮಳಿಗೆಗಳಲ್ಲಿ ಪ್ಲಾಸ್ಟಿಕ್​ ಚೀಲಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲು ಕ್ರಮ ವಹಿಸುವುದು.
  4. ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ 15 ದಿನಗಳಲ್ಲಿ ಬಟ್ಟೆಯ ಕೈಚೀಲ ಇಲ್ಲವೇ, ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳವಂತೆ ಸೂಚಿಸುವುದು. ನಂತರ ಒಂದು ಸಲಕ್ಕೆ ₹ 10 ದಂಡ ವಿಧಿಸುವುದು. ದೇವಾಲಯದಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಲು ಹೆಸರು ನಮೂದಿಸಿದ ಬುಟ್ಟಿಗಳನ್ನಿಡುವುದು.
  5. ಪರ್ಯಾಯವಾಗಿ ಸ್ಥಳಿಯ ಸ್ವ ಸಹಾಯ ಸಂಸ್ಥೆಗಳು/ಎನ್​ಜಿಓಗಳು ತಯಾರಿಸುವ ಪ್ಲಾಸ್ಟಿಕ್​ ಅಲ್ಲದ ಕೈ ಚೀಲ ಅಥವಾ ಉತ್ಪನ್ನಗಳನ್ನು ಬಳಸುವಂತೆ ಭಕ್ತರಿಗೆ ಮತ್ತು ವ್ಯಾಪಾರಿಗಳಿಗೆ ಒದಗಿಸಲು ಕ್ರಮ ವಹಿಸುವುದು. ದೇವಾಲಯದ ಪ್ರವೇಶ ದ್ವಾರಗಳಲ್ಲಿಯೆ ಪ್ಲಾಸ್ಟಿಕ್​ ಚೀಲಗಳನ್ನು ತರದಂತೆ ಭಕ್ತಾದಿಗಳಿಗೆ ತಪಾಸಣೆ ಮಾಡಿ ನಿರ್ಬಂಧ ವಿಧಿಸುವುದು.
  6. ಸ್ವಚ್ಛ ಮಂದಿರ ಅಭಿಯಾನದ ಅಡಿ ದೇವಾಲಯಗಳನ್ನು ಸ್ವಚ್ಛಗೊಳಿಸುವುದು, ದೇವಾಲಕ್ಕೆ ಹೊಂದಿಕೊಂಡಿರುವ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ದೇವಾಲಯಗಳಲ್ಲಿ ಜಾಗವಿರುವ ಕಡೆಗಳಲ್ಲಿ ಆಕರ್ಷಕ ಉದ್ಯಾನವನಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ.

ವಿಶೇಷ ವರದಿ: ಮಧು ಇಂಗಳದಾಳ್​, ಫಸ್ಟ್ ನ್ಯೂಸ್​