ಚಳಿಗಾಲದಲ್ಲಿ ನಿಮ್ಮ ತಲೆ ಕೂದಲನ್ನ ಡಿಟಾಕ್ಸ್​ ಮಾಡದಿದ್ರೆ ಕಂಟಕ ಗ್ಯಾರಂಟಿ..!

ಚಳಿಗಾಲದಲ್ಲಿ ಕೂದಲನ್ನ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಗಾಳಿಯಲ್ಲಿ ತೇವಾಂಶ ಇರದ ಕಾರಣ ಕೂದಲುಗಳು ಬೇಗ ಡ್ಯಾಮೇಜ್​ ಆಗುತ್ತವೆ. ಜೊತೆಗೆ ಧೂಳಿನಿಂದ ಡ್ಯಾಂಡ್ರಫ್​ ಆಗಿ ಕೂದಲು ಉದುರಲು ಆರಂಭವಾಗುತ್ತವೆ. ಅಷ್ಟೇ ಅಲ್ಲ, ಪೋಷ್ಟಿಕಾಂಶಗಳ ಕೊರತೆ, ವಾಯು ಮಾಲಿನ್ಯ, ಹಾರ್ಮೋನ್​ ಇಂ​ಬ್ಯಾಲೆನ್ಸ್​, ಸ್ಟ್ರೆಸ್​ನಿಂದ ಕೂಡಾ ಕೂದಲು ಹೆಚ್ಚಾಗಿ ಉದುರುತ್ತದೆ.

ಇದಲ್ಲದೇ, ಸೋಪ್, ಶ್ಯಾಂಪ್​​, ಕೆಮಿಕಲ್ಸ್​ಯುಕ್ತ ಹೇರ್ ​ಪ್ಯಾಕ್​ಗಳು, ಕೂಡಾ ಕೂದಲು ಉದುರಲು ಕಾರಣವಾಗುತ್ತದೆ. ಹೆಚ್ಚು ರಾಸಾಯನಿಕ ಉತ್ಪನ್ನಗಳ ಬಳಕೆಯು ನಿಮ್ಮ ಕೂಲಿನ ರಂಧ್ರಗಳನ್ನು ಮುಚ್ಚಿಬಿಡುತ್ತದೆ. ಆಗ ಕೂದಲು ಬಲಶಾಲಿಯಾಗದೇ ಉದುರುತ್ತವೆ. ಸೌಂದರ್ಯ ತಜ್ಞರಾದ ಶಹನಾಜ್ ಹುಸೇನ್ರ ಪ್ರಕಾರ, ‘‘ನಮ್ಮ ಚರ್ಮವನ್ನು ರಕ್ಷಿಸಲು ನಾವು ಹೆಚ್ಚು ಸಮಯ ಮತ್ತು ಶಕ್ತಿಯನ್ನು ಕಳೆಯುತ್ತೇವೆ. ಆದರೆ ತಮ್ಮ ಕೂದಲು ಆರೋಗ್ಯವಾಗಿ ಬೆಳೆಯುವಂತೆ ಹೆಚ್ಚು ಜನರು ಗಮನ ಕೊಡುವುದಿಲ್ಲ’’ ಎಂದಿದ್ದಾರೆ.

‘ದಿನ ನಿತ್ಯ ನೀವು ತಲೆ ಸ್ನಾನ ಮಾಡುವುದರಿಂದ ಕೂಡಲು ಶುಚಿಯಾಗಿರುವುದಿಲ್ಲ. ಅಥವಾ ಶಾಂಪೂಗಳು ಕೂಡಾ ನಿಮ್ಮ ಕೂದಲನ್ನ ಸ್ವಚ್ಛಗೊಳಿಸಲ್ಲ. ಆದರೆ ಕೆಲವು ನ್ಯಾಚುರಲ್​ ಇನ್​ಗ್ರೀಡಿಯೆಂಟ್ಸ್​ಗಳು ನಿಮ್ಮ ಕೂದಲಿನ ಕೊಳೆಯನ್ನ ತೆಗೆದುಹಾಕಿ ನೆತ್ತಿಯನ್ನ ಸಂಪೂರ್ಣವಾಗಿ ಶುದ್ಧಿಗೊಳಿಸಿ, ನಿಮ್ಮ ಕೂದಲಿಗೆ ಪುನರುಜ್ಜೀವನ ನೀಡಿ, ಹೊಳೆಯುವಂತೆ ಮಾಡುತ್ತದೆ.

ಮೊದಲಿಗೆ, ನಿಮ್ಮ ಕೂದಲಿಗೆ  ಹಾನಿಯನ್ನುಂಟುಮಾಡುವ  ಶ್ಯಾಂಪೂ, ಕೆಮಿಕಲ್ಸ್​ಗಳ ಬಳಕೆಯನ್ನ ಕಡಿಮೆ ಮಾಡಿ. ಹಾನಿಗೊಳಗಾದ ಕೂದಲು ಒಂದು ದುರ್ಬಲ ಸ್ಥಿತಿಯಲ್ಲಿದ್ದರೆ ಅದಕ್ಕೆ ಚಿಕಿತ್ಸೆ ನೀಡುವುದು ತುಂಬಾ ಅವಶ್ಯಕ.

ಮೊದಲು ನಿಮ್ಮ ಕೂದಲಿನ ಸ್ವೀಟ್ಸ್​ ರಿಮೂವ್​ ಮಾಡಿ. ನಂತರ, ತೆಂಗಿನ ಎಣ್ಣೆ ಹಾಗೂ ಕ್ಯಾಸ್ಟರ್ ಎಣ್ಣೆಯನ್ನು ಮಿಶ್ರಣ ಮಾಡಿ, ಸ್ವಲ್ಪ ಬಿಸಿ ಮಾಡಿ. ನಂತರ ಇದು ಬೆಚ್ಚಗಿರುವಾಗಲೇ ನಿಮ್ಮ ಕೂದಲಿಗೆ ಹಚ್ಚಿ ಮೃದುವಾಗಿ ಮಸಾಜ್​ ಮಾಡಿ.  ಕೂದಲಿನ ತುದಿಯವರೆಗೂ ಎಣ್ಣೆಯನ್ನ ಹಚ್ಚಬೇಕು. ನಂತರ, ಬಿಸಿ ನೀರಿನಲ್ಲಿ ಒಂದು ಟವಲ್ ಅದ್ದಿ, ನೀರನ್ನು ಹಿಂಡಿ ತಲೆಗೆ ಸುತ್ತಿಕೊಳ್ಳಿ. 5 ನಿಮಿಷಗಳ ಕಾಲ  ಟವಲ್​ಅನ್ನ ಹಾಗೇ ಕಟ್ಟಿಕೊಳ್ಳಿ. ಹೀಗೆ 3 ಅಥವಾ 4 ಬಾರಿ ಪುನರಾವರ್ತಿಸಿ. ಇದು ಕೂದಲು ಮತ್ತು ನೆತ್ತಿ ಎಣ್ಣೆಯನ್ನ ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕೂದಲನ್ನ ಡಿಟಾಕ್ಸ್​ ಮಾಡುವುದಕ್ಕಾಗಿ ಬೇಕಿಂಗ್ ಸೋಡಾವನ್ನು ಕೂಡ ಬಳಸಬಹುದು. ಸೋಡಿಯಂ ಬೈಕಾರ್ಬನೇಟ್ ಒಂದು ಅದ್ಭುತ ಕ್ಲೆನ್ಸರ್ ಮತ್ತು ಎಫ್ಫೋಲಿಯೇಟ್ ಆಗಿದ್ದು, ಅದು ಪ್ರಾಡೆಕ್ಟ್ಸ್​ಗಳು  ಬಿಲ್ಡಪ್​ ಆಗುವುದನ್ನ   ತಡೆಯುತ್ತದೆ. ಅರ್ಧ ಕಪ್ ಬೇಕಿಂಗ್ ಸೋಡಾವನ್ನು 3 ಕಪ್ ಬಿಸಿ ನೀರಿನಲ್ಲಿ ಬೆರೆಸಿ ಮತ್ತು ನಿಮ್ಮ ನೆತ್ತಿಯನ್ನು ಕೆಲವು ನಿಮಿಷಗಳ  ಮೃದುವಾಗಿ ಮಸಾಜ್​ ಮಾಡಿ.  ಈ ರೀತಿ ಮಾಡುವುದರಿಂದ ತಲೆಹೊಟ್ಟು, ಜಿಡ್ಡಿನಾಂಶವನ್ನ ತೆಗೆದುಹಾಕುತ್ತದೆ. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಆ್ಯಪಲ್ ಸೈಡರ್ ವಿನೆಗರ್ ನಿಮ್ಮ ಕೂದಲಿನಲ್ಲಿರುವ ಕೊಳೆಯನ್ನ ತೆಗೆದುಹಾಕುತ್ತದೆ ಮತ್ತು ನಿಮ್ಮ ಕೂದಲಿಗೆ ಹೊಳಪನ್ನ ನೀಡುತ್ತದೆ. ಒಂದು ಮಗ್​ನಲ್ಲಿ ನೀರನ್ನ ತೆಗೆದುಕೊಂಡು 2 ಟೇಬಲ್​ಸ್ಪೂನ್​ ಆಪಲ್ ಸೈಡರ್ ವಿನೆಗರ್ ಹಾಕಿ ಚೆನ್ನಾಗಿ ಬೆರೆಸಿ. ಶಾಂಪೂ ನಂತರ ಈ ಮಿಶ್ರಣವನ್ನ ಕಂಡಿಷನರ್​ ಥರಾ ಬಳಸಿ. ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಹೆಚ್ಚು ಹೊಳಪನ್ನ ಪಡೆದುಕೊಳ್ಳುತ್ತದೆ.

ಉಪ್ಪಿನಿಂದ ಕೂಡಾ ನಿಮ್ಮ ಕೂದಲನ್ನ ಡಿಟಾಕ್ಸ್​ ಮಾಡಬಹುದು. ಸ್ವಲ್ಪ ಉಪ್ಪು ತೆಗೆದುಕೊಂಡು ಅದಕ್ಕೆ ಶಾಂಪೂ ಮಿಕ್ಸ್​ ಮಾಡಿ. ನಿನ್ನ ಕೂದಲಿಗೆ ಹಚ್ಚಿ ಮಸಾಜ್​ ಮಾಡಿ. ನಂತರ  ತಣ್ಣನೆಯ ನೀರಿನಿಂದ ಅದನ್ನು ತೊಳೆಯಿರಿ. ಇದು ಡೆಡ್​ ಸ್ಕಿನ್​ ತೆಗೆದುಹಾಕಿ ಆರೋಗ್ಯವಂತ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಟೀ ಟ್ರೀ ಆಯಿಲ್ ನೈಸರ್ಗಿಕ ನಂಜುನಿರೋಧಕವಾಗಿದೆ, ಇದು ನೆತ್ತಿಯಿಂದ ಬ್ಯಾಕ್ಟಿರಿಯಾ, ಪದರಗಳು ಮತ್ತು ಡ್ಯಾಂಡ್ರಫ್ ಅನ್ನು ಹೊರಹಾಕುತ್ತದೆ. ನಿಮ್ಮ  ಶಾಂಪೂವಿನಲ್ಲಿ  ಟೀ ಟ್ರೀ ಆಯಿಲ್​ನ ಕೆಲವು ಹನಿಗಳನ್ನು ಸೇರಿಸಿ ನೆತ್ತಿಯ ಮೇಲೆ ಮಸಾಜ್ ಮಾಡಿ. ಕೆಲವು ನಿಮಿಷಗಳ ಕಾಲ ಬಿಟ್ಟು ವಾಶ್​ ಮಾಡಿ. ಜೊತೆಗೆ ಹೆಚ್ಚಾಗಿ ನೀರನ್ನ ಸೇವಿಸುವುದು ಕೂಡಾ ನಿಮ್ಮ ಕೂದಲನ್ನ ಡಿಟಾಕ್ಸ್​ ಮಾಡಲು ಸಹಕಾರಿಯಾಗಿದೆ. ಹೆಚ್ಚಾಗಿ ನೀರು ಸೇವಿಸುವುದರಿಂದ ದೇಹದಲ್ಲಿರುವ ಕಲ್ಮಶಗಳು ದೇಹದಿಂದ ಹೊರಹೋಗುತ್ತದೆ.