ದೇವೇಗೌಡ ಕುಟುಂಬದ ಕಣ್ಣೀರ ಕಹಾನಿ ಯಾಕೆ, ಸೈನಿಕರ ಸಾವಿಗೆ ಕಣ್ಣೀರು ಹಾಕಿದ್ರಾ?: ಈಶ್ವರಪ್ಪ

ಬಾಗಲಕೋಟೆ: ದೇವೇಗೌಡರ ಕುಟುಂಬದ ಕಣ್ಣೀರ ಕಹಾನಿ ಯಾತಕ್ಕೆ? ಎಂದು ಶಾಸಕ ಈಶ್ವರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಪುಲ್ವಾಮಾ ಸೈನಿಕರ ಸಾವಿಗಾಗಿ ಕಣ್ಣೀರು ಹಾಕಿದ್ರಾ? ಬರಕ್ಕೆ ಸಿಕ್ಕಿ ಕಂಗಾಲಾಗಿರೋ ರೈತರಿಗಾಗಿ ಕಣ್ಣೀರು ಬಂತಾ? ರಾಜ್ಯದಲ್ಲಿ ಹಿಂದೂ ಯುವಕರ ಕೊಲೆಗಳು ನಡೆದಾಗ ಇವರು ಕಣ್ಣೀರು ಹಾಕಲಿಲ್ಲ.  ಐಟಿ ದಾಳಿಯಲ್ಲಿ ಸಿಕ್ಕಿ ಹಾಕೊಂಡ್ರು ಅಂತ ಕಣ್ಣೀರು ಹಾಕಿದ್ರ? ಅವರು ಯಾವ ವಿಷಯಕ್ಕೆ ಕಣ್ಣೀರು ಹಾಕ್ತಾರೆ ಅಂತಾ ದೇವೇಗೌಡರ ಕುಟುಂಬ ಮೊದಲು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದರು.

ದೇವೇಗೌಡರು ನಮ್ಮದು ಕುಟುಂಬ ರಾಜಕಾರಣ ಅಲ್ಲ ಅಂತಾರೆ. ಆದ್ರೆ ಲೋಕಸಭೆ ಚುನಾವಣೆಗೆ ದೇವೇಗೌಡರು ಹಾಗೂ ಅವರ ಇಬ್ಬರು ಮೊಮ್ಮಕ್ಕಳು ನಿಂತಿದ್ದಾರೆ. ಒಬ್ಬ ಮಗ ಸಿಎಂ, ಇನ್ನೊಬ್ಬ ಮಗ ಸಚಿವ, ಸೊಸೆ ಶಾಸಕಿ. ಹೀಗಾಗಿ ಕುಟುಂಬ ರಾಜಕಾರಣ ಅಂದ್ರೆ ಅರ್ಥ ಏನು ಅಂತ ಹೇಳಲಿ ಎಂದರು.

ಇನ್ನು ವೀರಶೈವ ಲಿಂಗಾಯತ ವಿಚಾರದಲ್ಲಿ ನಾವು ಧರ್ಮ ಒಡೆಯಬೇಡಿ ಎಂದಿದ್ವಿ.  ಈಗ ಸಿದ್ದರಾಮಯ್ಯ ಹಾಗೂ  ಮಾಜಿ ಸಚಿವ ವಿನಯಕುಲಕರ್ಣಿ ದೊಡ್ಡ ತಪ್ಪು ಮಾಡಿದ್ವಿ ಅಂತಿದ್ದಾರೆ. ಧರ್ಮ ಜಾತಿ ಒಡೆಯುವುದಕ್ಕೆ ಮುಂದಾದವರು ಈ ದೇಶದಲ್ಲಿ ಮಣ್ಣು ಮುಕ್ಕಿದರು ಎಂದು ಈಶ್ವರಪ್ಪ ಹೇಳಿದ್ರು.

ಮೋದಿ ಓರ್ವ ಬಡಾಯಿ, ಸುಳ್ಳುಗಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆ  ಹೇಳಿಕೆಯಲ್ಲಿ ಮೋದಿ ಪದ ತೆಗೆದು, ಸಿದ್ದರಾಮಯ್ಯ ಹೆಸ್ರು ಸೇರಿಸಿಕೊಳ್ಳಿ ಎಂದು ಅವ್ರಿಗೆ ತಿರುಗೇಟು ಕೊಟ್ಟರು. ಸಿದ್ದರಾಮಯ್ಯ ಓರ್ವ ಬಡಾಯಿ, ಸುಳ್ಳುಗಾರ. ಅಭಿವೃದ್ಧಿ ಅನ್ನೋದು ಏನೂ ಮಾಡಿಲ್ಲ. ಮೋದಿ ನೇತೃತ್ವದ ಬಿಜೆಪಿಯಿಂದ ರಾಜ್ಯದಲ್ಲಿ 22 ಸಂಸದರನ್ನ ಜನ ಆಯ್ಕೆ ಮಾಡುತ್ತಾರೆ. ಆದ್ರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವ್ರನ್ನ ಜನ ತಿರಸ್ಕಾರ ಮಾಡಿದ್ದಾರೆ. ಮೋದಿ ನೇತೃತ್ವದ ಬಿಜೆಪಿಯನ್ನು ದೇಶವೇ ಒಪ್ಪಿದೆ ಎಂದರು.

ಬಿಜೆಪಿ ಅಭ್ಯರ್ಥಿ ಎ.ಮಂಜುರನ್ನ ಹಾಸನದ ಜನತೆ ಗೆಲ್ಲಿಸ್ತಾರೆ. ಚುನಾವಣೆ ವೇಳೆ ಕೋಟಾದಡಿ ಸೀಟುಗಳು ಹಂಚಿಕೆಯಾಗಬಾರದು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಂತಾ ವ್ಯತ್ಯಾಸ ಮಾಡಬಾರದು. ಆಯಾ ವ್ಯಾಪ್ತಿಯ ಕಾರ್ಯಕರ್ತರ ಆಶಯಕ್ಕೆ ಅನುಗುಣವಾಗಿ ಸೀಟು ಹಂಚಿಕೆಯಾಗಬೇಕು. ಬಿಜೆಪಿ ಪ್ರಣಾಳಿಕೆಯಿಂದ ದೇಶ ಭಕ್ತರಿಗೂ ಹಾಗೂ ರೈತರಿಗೂ ಬಹಳ ಸಂತೋಷವಾಗಿದೆ ಎಂದು ಹೇಳಿದ್ರು.

ರಾಮಮಂದಿರ ನಿರ್ಮಾಣ ಎಲ್ಲರ‌ ಕನಸು.  ಈ ದೇಶದಲ್ಲಿ ಹುಟ್ಟಿದವರು ಎಲ್ಲರು ಭಾರತಾಂಬೆಯ ಮಕ್ಕಳು. ಎಲ್ಲರಿಗೂ ಒಂದೇ ಕಾನೂನು ತರುತ್ತೇವೆ ಅನ್ನೋದು ಜನರಲ್ಲಿ ಸಂತೋಷವಿದೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv