ಟ್ವಿಟರ್ ನೆಪಕ್ಕೆ ಬ್ರೇಕ್, ಕಟ್ಟರ್ ಎಚ್ಚರಿಕೆ ನೀಡಿತು ಸಂಸದೀಯ ಟೀಂ

ನವದೆಹಲಿ: ಸಂಸದೀಯ ಸಮಿತಿ ಎದುರು ಫೆಬ್ರವರಿ 11 ರಂದು ಹಾಜರಾಗಬೇಕೆಂದು ಟ್ವಿಟರ್​ ಸಿಇಒ ಜಾಕ್​ ಡೋರ್ಸೆಗೆ ಬಿಜೆಪಿ ಸಂಸದ ಅನುರಾಗ್​ ಠಾಕೂರ್​ ನೇತೃತ್ವದ 31 ಸದಸ್ಯರ ಸಂಸದೀಯ ಸಮಿತಿ ಸಮನ್ಸ್​ ನೀಡಿತ್ತು. ಆದ್ರೆ ಇಂದು ಜಾಕ್​ ಡೋರ್ಸೆ ಹಾಜರಾಗದೆ, ಅವರ ಪ್ರತಿನಿಧಿಗಳು ಸಮಿತಿಯ ಎದುರು ಹಾಜರಾಗಲು ಯತ್ನಿಸಿದರು. ಇದನ್ನು ಅರಿತ ಸಮಿತಿ, ಅವರ ಭೇಟಿಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದೆ.
ಈ ಬೆಳವಣಿಗೆಯ ನಂತರ, ಟ್ವಿಟರ್​ ಸಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು ಭಾರತದ ಸಂಸದೀಯ ಸಮಿತಿಯಂತಹ ಉನ್ನತ ಅಂಗವನ್ನು ಟ್ವಿಟರ್​ ಗಂಭೀರವಾಗಿ ಪರಿಗಣಿಸಿಲ್ಲ. ಇದರ ಪರಿಣಾಮ ತೀವ್ರವಾಗಿರುತ್ತದೆ ಎಂದು ಎಚ್ಚರಿಸಿದೆ.

ಈ ಕುರಿತು ಒಮ್ಮತದ ನಿರ್ಧಾರ ತೆಗೆದುಕೊಂಡಿರುವ ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸದೀಯ ಸಮಿತಿಯು ಸ್ವತಃ ಟ್ವಿಟರ್​ ಸಿಇಒ ಜಾಕ್​ ಡೋರ್ಸೆ ಅಥವಾ ಅವರಿಗೆ ಸರಿಸಮಾನರಾದವರು ಸಮಿತಿಯ ಎದುರು ಹಾಜರಾಗದ ಹೊರತು, ಬೇರೆ ಯಾರನ್ನೂ ತಾನು ಭೇಟಿಗೆ ಅವಕಾಶ ನೀಡುವುದಿಲ್ಲ. ಇದಕ್ಕಾಗಿ 15 ದಿನಗಳ ಗಡುವು ನೀಡುವುದಾಗಿಯೂ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರ ಹಕ್ಕುಗಳನ್ನ ಸಂರಕ್ಷಿಸುವ ಸಲುವಾಗಿ ಸಂಸದೀಯ ಸಮಿತಿ ಎದುರು ಹಾಜರಾಗಲು ಟ್ವಿಟರ್​ ಸಿಇಒ ಮತ್ತು ಉನ್ನತಾಧಿಕಾರಿಗಳಿಗೆ ಸಂಸದೀಯ ಸಮಿತಿ ಈ ಹಿಂದೆಯೇ ಸೂಚನೆ ನೀಡಿದೆ.
ಭಾರತೀಯ ಟ್ವಿಟರ್​ ಖಾತೆದಾರರ ಡೇಟಾ ಸಂರಕ್ಷಣೆ ಮತ್ತು ಚುನಾವಣಾ ಸಂಬಂಧ ಮಾಹಿತಿ ಸೋರಿಕೆ ಹಾಗೂ ಪಕ್ಷಪಾತದ ಬಗ್ಗೆ ಇತ್ತೀಚೆಗೆ ಭಾರೀ ಆತಂಕ, ಕಾಳಜಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಟ್ವಿಟರ್​ ಸಿಇಒ ಸಂಸದೀಯ ಸಮಿತಿ ಸೂಚಿಸಿತ್ತು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv