ಸಾಲು ಮರದ ತಿಮ್ಮಕ್ಕರಿಗೆ ಪರಿಸರ ಪ್ರೇಮಿ ಪ್ರಶಸ್ತಿ: ರಾಜಾ ಹನುಮಪ್ಪ ನಾಯಕ್

ರಾಯಚೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಇದೇ ತಿಂಗಳು 8ರಂದು ಸಾಲು ಮರದ ತಿಮ್ಮಕ್ಕರನ್ನು ಸನ್ಮಾನಿಸಲಾಗುವುದು ಎಂದು ಸೇವಾ ಸಂಸ್ಥೆಯ ರಾಜಾ ಹನುಮಪ್ಪ ನಾಯಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿ ಕೂಡ ಮಾನ್ವಿ ಪಟ್ಟಣದ ಕಲ್ಮಠ ಧ್ಯಾನ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಲು ಮರದ ತಿಮ್ಮಕ್ಕನವರನ್ನು ಪುರಸ್ಕರಿಸಲಾಗುತ್ತಿದೆ ಎಂದರು.

ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಗೆ 15 ಸಾವಿರ ಉಚಿತ ಸಸಿಗಳನ್ನು ವಿತರಿಸಲಾಗುತ್ತದೆ ಎಂದರು. ಅಲ್ಲದೇ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪರಿಸರ ಪ್ರಿಯರು ಆಗಮಿಸುವಂತೆ ಮನವಿ ಮಾಡಿಕೊಂಡರು.

ಸಾಲು ಮರದ ತಿಮ್ಮಕ್ಕ  ಅವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ಜೊತೆಗೆ ₹51 ಸಾವಿರ ನಗದು ನೀಡಿ ಪುರಸ್ಕರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ರಾಜಾ ಹನುಮಪ್ಪ ನಾಯಕ್ ಸೇವಾ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆಯಂದು ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಸ್ತೆ ಬದಿಗಳಲ್ಲಿ, ಉದ್ಯಾನವನಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವಂತಹ ಕೆಲಸ ಮಾಡುತ್ತ ಪರಿಸರ ಕಾಳಜಿ ಮೆರೆಯುತ್ತಿದೆ.