ನಿಮ್ಮ ಕೆಲಸದ ಒತ್ತಡ ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಎಚ್ಚರ..!

ಅಪ್ಪಾ ನನ್ನ ಜಾಸ್ತಿ ಮುದ್ದು ಮಾಡಲ್ಲ. ಅಮ್ಮಾ ನನ್ನ ಜೊತೆ ಹೆಚ್ಚು ಸಮಯ ಕಳೆಯೋದಿಲ್ಲ ಅನ್ನೋದು ವರ್ಕಿಂಗ್​ ಪೇರೆಂಟ್ಸ್​ ಮಕ್ಕಳ ಫಸ್ಟ್​ ಕಂಪ್ಲೆಂಟ್. ಹಾಗಂತ ಇದನ್ನ ತಪ್ಪು ಅಂತಾ ಹೇಳೋಕಾಗಲ್ಲ. ಯಾಕಂದ್ರೆ ಬದಲಾಗುತ್ತಿರೋ ಕಾಲಮಾನದಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೇನೆ ಫ್ಯಾಮಿಲಿಯನ್ನ ನಿರ್ವಹಿಸಬಹುದು ಎನ್ನುವಂತಾಗಿದೆ. ಕೆಲಸ ಮಾಡುವ ಉದ್ದೇಶ ಒಳ್ಳೆಯದೇ ಆದ್ರೂ ನಿಮ್ಮ ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಮಕ್ಕಳ ಬಗ್ಗೆ ಗಮನ ಕೊಡಲು ಕಷ್ಟವಾಗುತ್ತದೆ.

ಮಕ್ಕಳಿಗೆ ಕೆಲವು ಆಸೆಗಳಿರುತ್ತೆ. ಅಮ್ಮ ನಮಗೆ ಹೋಂ ವರ್ಕ್​ ಮಾಡಿಸ​ಬೇಕು. ಅಪ್ಪ ಅಮ್ಮನ ಜೊತೆ ಹೆಚ್ಚು ಟೈಂ ಸ್ಪೆಂಡ್​ ಮಾಡಬೇಕು. ಹೊರಗಡೆ ಚೆನ್ನಾಗಿ ಸುತ್ತಾಡಬೇಕು ಹೀಗೆ ತುಂಬಾ ಆಸೆಗಳನ್ನ ಇಟ್ಟುಕೊಂಡಿರುತ್ತಾರೆ. ಆದರೆ ಇದನ್ನ ಫುಲ್​ಫಿಲ್​ ಮಾಡದೇ ಹೋದಲ್ಲಿ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ ಎಂದು ಮನೋವೈದ್ಯರು ಹೇಳುತ್ತಾರೆ. ಅಲ್ಲದೇ ನಾನು ನನ್ನ ಅಪ್ಪ ಅಮ್ಮನಿಗೆ ಇಷ್ಟವಿಲ್ಲ. ಅವರು ನನ್ನನ್ನು ಹೆಚ್ಚು ಪ್ರೀತಿಸುವುದಿಲ್ಲ ಎಂಬ ಕೀಳರಿಮೆಯನ್ನ ಬೆಳೆಸಿಕೊಳ್ಳುತ್ತಾರಂತೆ. ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಬಹುದು.

ಪೋಷಕರಿಗೆ ಕೆಲಸದಲ್ಲಿ ತುಂಬಾ ಒತ್ತಡವಿದ್ದರೆ,  ಅವರು ತಮ್ಮ ಮೇಲಿನ ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತಿರುತ್ತಾರೆ ಎಂದು ಪ್ರೊಫೆಸರ್ ಕ್ರಿಸ್ಟಿಯಾನ್ ಸ್ಪಿಟ್ಜ್ಮುಯೆಲರ್ ಹೇಳುತ್ತಾರೆ. ಒತ್ತಡದ ಜೀವನ ಸಾಮಾನ್ಯವಾಗಿ ಕೋಪ, ಖಿನ್ನತೆಯನ್ನ ಉಂಟು ಮಾಡುತ್ತದೆ. ಪೋಷಕರ ಈ ನಡುವಳಿಕೆ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನ ಬೀರುತ್ತದೆ.

ಇನ್ನು ಕಡಿಮೆ ಸಂಬಳ, ಖರ್ಚು ಹೆಚ್ಚು ಎಂಬುದು ಕೂಡ ಪೋಷಕರನ್ನ ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಕಡಿಮೆ ಸಂಬಳದಿಂದ ಜೀವನ ನಿರ್ವಹಣೆಯೂ ಕಷ್ಟ. ಜೊತೆಯಲ್ಲಿ ಮಕ್ಕಳ ಆಸೆ ಆಕಾಂಕ್ಷೆಗಳನ್ನ ಈಡೇರಿಸಲು ಸಾಧ್ಯವಾಗದೇ ಇರಬಹುದು. ಇದು ಕೂಡಾ ಮಕ್ಕಳಲ್ಲಿ ಹಠ ಮಾಡುವ ಪ್ರವೃತ್ತಿ ಮತ್ತು ಕೋಪ, ತಿರಸ್ಕಾರದ ಮನೋಭಾವನೆಯನ್ನ ಬೆಳೆಸುತ್ತದೆ. ನಿಮ್ಮ ಕೆಲಸದ ಜೊತೆಗೆ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡುವುದು, ಅವರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮಕ್ಕಳು ಆರೋಗ್ಯವಾಗಿ ಬೆಳೆಯಲು  ಸಹಾಯವಾಗುತ್ತೆ ಎಂದು ಸ್ಪಿಟ್ಜ್ಮುಯೆಲರ್  ಹೇಳುತ್ತಾರೆ. ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡದ ಹೊರತು ಮಕ್ಕಳ ಭಾವನೆಗಳನ್ನ ಅರಿತುಕೊಳ್ಳುವಲ್ಲಿ ಪೋಷಕರು ವಿಫಲವಾಗಬಹುದು. ಮಕ್ಕಳೊಂದಿಗೆ ಹೆಚ್ಚು ಮಾತನಾಡುವುದರಿಂದ ಪೋಷಕರು ಮತ್ತು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.

ಈ ಅಧ್ಯಯನಕ್ಕಾಗಿ ನಡೆಸಿದ ಸರ್ವೇಯಲ್ಲಿ ಕೆಲವು ಪೋಷಕರು ಮತ್ತು ಮಕ್ಕಳು ಇಬ್ಬರಿಂದಲೂ ಮಾಹಿತಿ ಸಂಗ್ರಹಿಸಲಾಗಿತ್ತು. ಇವರಲ್ಲಿ ಕಡಿಮೆ ಆದಾಯದ ಕುಟುಂಬಗಳ ಒಂದು ಗುಂಪು ಮತ್ತು ಹೆಚ್ಚು ಆದಾಯವಿರುವ ಕುಟುಂಬಗಳ ಇನ್ನೊಂದು ಗುಂಪು ಮಾಡಲಾಯಿತು. ಆದರೆ ಈ ಎರಡು ಕುಟುಂಬಗಳಲ್ಲಿ ಕೇವಲ ಆದಾಯದ ಅಂತರವಿತ್ತು ಅಷ್ಟೇ ಬದಲಾಗಿ ಪೋಷಕರ ವರ್ತನೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ ಎಂದು ಹೇಳಿದೆ.

ಆದ್ದರಿಂದ ಕೆಲಸದ ಒತ್ತಡವನ್ನ ಆದಷ್ಟು ಕಡಿಮೆ ಮಾಡಿಕೊಂಡು, ಮಕ್ಕಳ ಕಡೆ ಗಮನ ಹರಿಸಲು ಪ್ರಯತ್ನ ಮಾಡಿ, ಸಾಧ್ಯವಾದಷ್ಟು ಹೆಚ್ಚು ಸಮಯವನ್ನ ಅವರೊಂದಿಗೆ ಕಳೆಯಿರಿ. ಧ್ಯಾನ, ಸ್ಟ್ರೆಸ್​ ಕಡಿಮೆ ಮಾಡುವಂತಹ ವ್ಯಾಯಾಮಗಳನ್ನ ಮಾಡುವುದರಿಂದ ಖಿನ್ನತೆ ಕಡಿಮೆ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಫ್ಯಾಮಿಲಿ ಜೊತೆ ಉತ್ತಮ ಬಾಂಧವ್ಯ ಹೊಂದಲು ಸಹಾಯ ಮಾಡುತ್ತದೆ.