ಕಾಂಗ್ರೆಸ್​​ ನಾಯಕರಿಗೆ ಪರಮೇಶ್ವರ್ ಕಂಟಕ..!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಮುಂದಿನ ಅಧ್ಯಕ್ಷರು ಯಾರು ಆಗ್ತಾರೆ ಎಂಬುದಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ. ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜಿ. ಪರಮೇಶ್ವರ್, ಸಮ್ಮಿಶ್ರ ಸರ್ಕಾರದಲ್ಲಿ ಉಪ-ಮುಖ್ಯಮಂತ್ರಿಯಾಗಿ, ಗೃಹ ಸಚಿವರಾಗಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಬೆನ್ನಲ್ಲೇ, ಅವರ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಯಾರೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ರೂ, ಆ ಸ್ಥಾನ ತ್ಯಜಿಸುವ ಮುನ್ನಾ ಪರಮೇಶ್ವರ್ ಹೈಕಮಾಂಡ್ ಮುಂದೆ ಭರ್ಜರಿ ಗೇಮ್ ಆಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಫಸ್ಟ್ ನ್ಯೂಸ್ ಗೆ ಲಭ್ಯವಾಗಿದೆ.

ಹೊಸ ಅಧ್ಯಕ್ಷ ಅಯ್ಕೆಗೂ ಬೇಕು ಪರಂರಿಂದ ಗ್ರೀನ್ ಸಿಗ್ನಲ್..!
ಕಳೆದ ಏಳುವರೆ ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜಿ. ಪರಮೇಶ್ವರ್, ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಸಾರಥಿ ಯಾರು ಆಗಬೇಕೆಂದು ಹೈಕಮಾಂಡ್ ಬಳಿ ಸ್ಪಷ್ಟ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಡಾ. ಜಿ. ಪರಮೇಶ್ವರ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ರು, ಆ ಸ್ಥಾನ ಮಾಜಿ ಸಿದ್ಧರಾಮಯ್ಯರ ಅಪ್ತರ ಬಣಕ್ಕೆ ಮಾತ್ರ ಸಿಗದಂತೆ ಪರಂ ಎಚ್ಚರ ವಹಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರ ಅಪ್ತ ಬಣದಲ್ಲಿ ಗುರುತಿಸಿಕೊಂಡಿರುವವರೇ ಹೆಚ್ಚಾಗಿ ಲಾಬಿ ಮಾಡುತ್ತಿದ್ರು. ಅವರ ಪೈಕಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಮುಖರು. ಇವರನ್ನು ಹೊರತುಪಡಿಸಿ ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿವ ಡಿ.ಕೆ.ಶಿವಕುಮಾರ್ ಕೂಡ ರೇಸ್ ನಲ್ಲಿದ್ರು.
ಈ ನಾಲ್ವರಲ್ಲಿ ಡಿ.ಕೆ.ಶಿವಕುಮಾರ್​ಗೆ ಸಮ್ಮಿಶ್ರ ಸರ್ಕಾರದಲ್ಲಿ ಪ್ರಬಲ ಎರಡು ಖಾತೆಗಳ ಜವಾಬ್ದಾರಿ ನೀಡಿರುವುದರಿಂದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ರೇಸ್ ನಿಂದ ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದು, ಮೊನ್ನೆಯೆಷ್ಟೇ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಮುಂಬರುವ ದಿನದಲ್ಲಿ ನಿಮಗೆ ಸಚಿವ ಸ್ಥಾನ ಕೊಡುತ್ತೇವೆ, ಈಗ ಸುಮ್ಮನಿರಿ ಎಂದು ಖುದ್ದು ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಕಡೆಯದಾಗಿ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ದಿನೇಶ್ ಗುಂಡೂರಾವ್​ಗೆ ಸಮುದಾಯದ ಹೆಸರು ಮತ್ತು ಪರಂ ಮೇಲಾಟದಿಂದ ದಿನೇಶ್ ರನ್ನು ಸುಮ್ಮನಿರಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. ಇತ್ತ ಬಿ.ಕೆ.ಹರಿಪ್ರಸಾದ್ ಹೈಕಮಾಂಡ್ ನಾಯಕರ ಬಳಿ ಚೆನ್ನಾಗಿದ್ರೂ, ಲೋಕಸಭಾ ಚುನಾವಣೆಯ ಹಿತದೃಷ್ಠಿಯಿಂದಾಗಿ ಅವರನ್ನು ಅಧ್ಯಕ್ಷ ಗಾದಿಯಿಂದ ದೂರ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಕ್ಷ ಸಂಘಟನೆಯಾಗಿ ನೀವು ಪ್ರಧಾನಿಯಾಗಬೇಕು ಅಂತಹವರನ್ನು ಅಧ್ಯಕ್ಷ ಹುದ್ದೆಗೆ ತನ್ನಿ..!
ಹೀಗೊಂದು ಮಾತನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಖುದ್ದು ರಾಹುಲ್ ಗಾಂಧಿ ಮುಂದೆ ಪ್ರಸ್ತಾಪಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳ ಕನಿಷ್ಟ 25 ಸ್ಥಾನಗಳಲ್ಲಿ ಗೆಲ್ಲಬೇಕು. ಇದಕ್ಕೆ ಈಗಿನಿಂದಲೇ ಪಕ್ಷ ಸಂಘಟನೆಯಾಗಬೇಕು. ನೀವು ಗೆದ್ದು ಭಾರತದ ಪ್ರಧಾನಮಂತ್ರಿಯಾಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಸಮರ್ಥ ವ್ಯಕ್ತಿ ಹುಡುಕಿ ತಂದು ಕೂರಿಸಿ ಎಂದಿದ್ದಾರೆ. ಈ ಮಾತಿನಿಂದ ಸ್ಫೂರ್ತಿಗೊಂಡಿರುವ ರಾಹುಲ್ ಗಾಂಧಿ, ಪರಮೇಶ್ವರ್​ಗೆ ಅಧ್ಯಕ್ಷ ಅಭ್ಯರ್ಥಿಯ ಸಂಪೂರ್ಣ ಹುಡುಗಾಟದ ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ.

ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದು ಹಾಲು-ಅನ್ನ..!
ಮುಂದಿನ 10-11 ತಿಂಗಳೊಳಗೆ ಲೋಕಸಭಾ ಚುನಾವಣೆ ಎದುರಾಗಲಿದ್ದು, ಕಳೆದ ಬಾರಿ ರಾಜ್ಯದ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಆದ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೀಗಾಗಬಾರದು. ಕನಿಷ್ಟ 25 ಕ್ಷೇತ್ರಗಳಲ್ಲಾದ್ರೂ ಕಾಂಗ್ರೆಸ್ ಗೆಲ್ಲಬೇಕು. ಇದಕ್ಕೆ ಈಗಿನಿಂದಲೇ ನಾವೆಲ್ಲಾ ಸನ್ನದ್ಧರಾಗಿ ದುಡಿಯಬೇಕಲು ಎಂದು ಪರಂ ರಾಹುಲ್ ಮುಂದೆ ವಿಚಾರವಿಟ್ಟಿದ್ದಾರೆ ಎನ್ನಲಾಗಿದೆ.
ಇದೆನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿರುವ ರಾಹುಲ್ ಕೂಡ ಎಡವದೇ, ಹೆಜ್ಜೆ ಇಡಲಿದ್ದು, ಪರಮೇಶ್ವರ್​​​ಗೆ ಅಧ್ಯಕ್ಷರ ಆಯ್ಕೆ ಜವಾಬ್ದಾರಿವಹಿಸಿದ್ದಾರೆ. “ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದು ಹಾಲು-ಅನ್ನ” ಎಂಬ ಗಾದೆಯ ಮಾತಂತೆ ಪರಮೇಶ್ವರ್ ಅವರೇ ಕೆಪಿಸಿಸಿ ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ಧರಾಮಯ್ಯ ಬಣದವರನ್ನು ದೂರವಿಟ್ಟು, ಪಕ್ಷ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಹಿಡಿತ ಸಾಧಿಸಿರುವ ಪರಮೇಶ್ವರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ ಆಯ್ಕೆಗೂ ವರದಾನವಾಗಿದೆ.

ವಿಶೇಷ ವರದಿ :- ಪಿ. ಮಧುಸೂಧನ್.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv