ಆಗಸದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ, ದೃಶ್ಯ ನೋಡಿ ಭಯಬಿದ್ದ ರಷ್ಯಾ ಜನ..!

ರಷ್ಯಾ: ಸೈಬಿರಿಯಾದ ಕ್ರಸ್ನೋಯಾರ್ಸ್ಕಾ ಪ್ರದೇಶದಲ್ಲಿ ಉಲ್ಕೆಯೊಂದು ಸ್ಫೋಟಿಸಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಬೆಳಗ್ಗೆ ರಷ್ಯಾದ ಸ್ಥಳೀಯ ಕಾಲಮಾನ 7 ಗಂಟೆ ಸುಮಾರಿಗೆ ಸ್ಫೋಟದ ಸದ್ದು ಕೇಳಿ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ವೇಳೆ ಆಕಾಶದಲ್ಲಿ ಏನೋ ಬೆಳಕು ಹಾದು ಹೋದಂಥ ದೃಶ್ಯ ಕಂಡುಬಂದಿದೆ. ಮೊದಲಿಗೆ ಯಾವುದೋ ವಿಮಾನ ಸ್ಫೋಟಿಸಿರಬೇಕೆಂದು ಜನ ತಿಳಿದುಕೊಂಡಿದ್ದರು. ಆದರೆ ಕೊನೆಗೆ ಅದು ಉಲ್ಕೆಯ ಸ್ಫೋಟ ಎಂದು ಗೊತ್ತಾಗಿದೆ.

ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ದೊಡ್ಡ ಪ್ರಮಾಣದ ಸದ್ದನ್ನ ಕೇಳಿ ಭಯಗೊಂಡು ಮನೆಯಿಂದ ಹೊರಬಂದೆವು. ಆಗ ನಮಗೆ ಆಕಾಶದಲ್ಲಿ ಬೆಂಕಿ ರೀತಿ ಬೆಳಕೊಂದು ಕಂಡುಬಂತು. ಅದನ್ನ ನೋಡಿ ಮೊದಲು ಯಾವುದೋ ವಿಮಾನ ಸ್ಫೋಟಗೊಂಡಿರಬೇಕು ಅಂದುಕೊಂಡೆವು. ಕೊನೆಗೆ ಜೇಬಿನಿಂದ ಮೊಬೈಲ್​ ತೆಗೆದು ವಿಡಿಯೋ ಮಾಡಲು ಮುಂದಾದೆವು. ಆದ್ರೆ ಅದು ತುಂಬಾ ವೇಗವಾಗಿ ಚಲಿಸುತ್ತಿದ್ದರಿಂದ ಮೊಬೈಲ್​ನಲ್ಲಿ ಕೇವಲ ಅದರ ಬೆಳಕು ಮಾತ್ರ ಸೆರೆಯಾಯಿತು ಎಂದಿದ್ದಾರೆ.

ದೃಶ್ಯ ನೋಡಿದ ಮತ್ತೋರ್ವ ಪ್ರತ್ಯಕ್ಷದರ್ಶಿ ಮಾತನಾಡಿ, ಆಕಾಶದಲ್ಲಿ ಏನೋ ವೆಲ್ಡಿಂಗ್​ ಮಾಡಿದ ರೀತಿ ಬೆಳಕು ಕಂಡಿತು. ಅದನ್ನ ನೋಡಿ ನಾನು ಯಾವುದೋ ಏರ್​ ವೆಹಿಕಲ್ ಇರಬೇಕು ಎಂದುಕೊಂಡೆ ಅಂತ ಹೇಳಿದ್ದಾರೆ.  ​

ತಮ್ಮ ಅನುಭವ ಹಂಚಿಕೊಂಡ ಇನ್ನೊಬ್ಬ ಪ್ರತ್ಯಕ್ಷದರ್ಶಿ, ನಾನು ನೋಡಿದ ಅತೀ ಸುಂದರಮಯ ದೃಶ್ಯವಿದು. ಆ ಜೋರಾದ ಶಬ್ದವನ್ನ ಕೇಳಿ ಆಕಾಶದಲ್ಲಿ ಏನೋ ಸ್ಫೋಟಿಸಿರಬಹುದು ಎಂದುಕೊಂಡೆ. ಆದ್ರೆ ಅದು ಉಲ್ಕೆ ಸ್ಫೋಟಗೊಂಡ ದೃಶ್ಯ ಎಂದರು. ಇದರ ಬಗ್ಗೆ ಉರಲ್ ಫೆಡರಲ್ ಯೂನಿವರ್ಸಿಟಿಯ ವಿಕ್ಟರ್ ಗ್ರೋಕೋವಸ್ಕಿ ಸ್ಪಷ್ಟನೆ ನೀಡಿದ್ದು, ಆಕಾಶದಿಂದ ಬಿದ್ದ ಉಲ್ಕೆ ಭೂಮಿಗೆ ಅಪ್ಪಳಿಸುವ ಮೊದಲೇ ಸ್ಫೋಟಗೊಂಡಿದೆ. ಇದ್ರಿಂದ ಭಾರೀ ಸದ್ದು ಹಾಗೂ ಸ್ಫೋಟದ ಬೆಳಕು ಕಾಣಿಸಿದೆ ಎಂದು ಹೇಳಿದರು.