ಆಫ್ರಿಕಾ ದೇಶವಂತೆ, ಜರ್ಮನಿ-ಜಪಾನ್​​ ನೆರೆಯವರಂತೆ: ನಗೆಪಾಟಲಿಗೀಡಾದ ಪಾಕ್​ ಪ್ರಧಾನಿ

ಇಸ್ಲಾಮಾಬಾದ್​: ಆಫ್ರಿಕಾ ಖಂಡವನ್ನು ದೇಶ ಎಂದು ಇತ್ತೀಚೆಗೆ ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​​ ಇದೀಗ ಮತ್ತೊಂದು ಯಡವಟ್ಟು ಮಾಡಿದ್ದಾರೆ. ಜರ್ಮನಿ ಮತ್ತು ಜಪಾನ್​​ ಮಧ್ಯೆ ಗಡಿ ರೇಖೆಯಿದೆ ಎಂದು ಪ್ರಧಾನಿ ಇಮ್ರಾನ್ ಹೇಳಿದ್ದು, ವ್ಯಾಪಕವಾಗಿ ವೈರಲ್​ ಆಗಿದೆ. ಪಾಕಿಸ್ತಾನೀಯರೇ ಇಮ್ರಾನ್​ರ ಈ ಹೇಳಿಕೆಯನ್ನು ಸಖತ್ ಟ್ರೋಲ್ ಮಾಡಿದ್ದಾರೆ. ಅಲ್ಲಿನ ವಿಪಕ್ಷಗಳು ಕೂಡ ಇಮ್ರಾನ್ ಖಾನ್ ವಿರುದ್ಧ ಟೀಕಾಪ್ರಹಾರ ಮಾಡಿವೆ.

ಇನ್ನು ಆಕ್ಸ್​​ಫರ್ಡ್​​ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿರುವ ಇಮ್ರಾನ್​ ಖಾನ್​ ಯಾಕೆ ಇಂಥಾ ತಪ್ಪು ಮಾಹಿತಿ ನೀಡತೊಡಗಿದ್ದಾರೆ ಎಂದು ಜನ ಮಾತನಾಡತೊಡಗಿದ್ದಾರೆ. ಇರಾನ್​ ಅಧ್ಯಕ್ಷ ಹಸನ್​ ರೋಹಾನಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಪಾಕ್​ ಪ್ರಧಾನಿ ಇಮ್ರಾನ್​ ಖಾನ್, ಜರ್ಮನಿ ಮತ್ತು ಜಪಾನ್ ಒಂದೇ ಗಡಿಯನ್ನು ಹಂಚಿಕೊಂಡಿವೆ. ಎರಡನೇ ಮಹಾಯುದ್ಧದ ವೇಳೆ ಪರಸ್ಪರ ಲಕ್ಷಾಂತರ ಜನರನ್ನು ಈ ದೇಶಗಳು ಹತ್ಯೆ ಮಾಡಿದ್ದರೂ ಇಂದು ಗಡಿಯಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿವೆ. ಹಲವು ಕಂಪನಿಗಳನ್ನು ಗಡಿಯಲ್ಲಿ ಸ್ಥಾಪಿಸಿವೆ, ಇದೇ ರೀತಿ ಪಾಕಿಸ್ತಾನ ಮತ್ತು ಇರಾನ್​ ಇರಬೇಕು ಎಂದು ಹೇಳಿದ್ರು. ಆದ್ರೆ, ಇಮ್ರಾನ್​ ಖಾನ್ ಈ ಮಾತು ಹೇಳುತ್ತಲೇ ಸ್ಥಳದಲ್ಲಿದ್ದ ಪತ್ರಕರ್ತರು ಹಾಗೂ ಉನ್ನತ ಅಧಿಕಾರಿಗಳು ಮುಸಿ ಮುಸಿ ನಗುವಂತಾಯಿತು. ಏಕೆಂದ್ರೆ, ಆಕ್ಸ್​​ಫರ್ಡ್​​ನಲ್ಲಿ ವ್ಯಾಸಂಗ ಮಾಡಿರೋ ಇಮ್ರಾನ್​ ಖಾನ್​​ ಹೇಳಿಕೆ ತಪ್ಪುಗಳಿಂದಲೇ ತುಂಬಿ ಹೋಗಿವೆ. ಇಮ್ರಾನ್​ ಹೇಳಿದಂತೆ ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ಮತ್ತು ಜರ್ಮನಿ ವೈರಿ ರಾಷ್ಟ್ರಗಳಾಗಿರಲಿಲ್ಲ. ಇವೆರಡೂ ಒಟ್ಟಿಗೇ ಯುದ್ಧವನ್ನು ನಡೆಸಿದ್ದವು. ಇನ್ನು ಈ ಎರಡೂ ದೇಶಗಳ ಮಧ್ಯೆ ಒಂದೇ ಗಡಿಯಿಲ್ಲ. ಏಕೆಂದ್ರೆ ಏಷ್ಯಾದಲ್ಲಿರೋ ಜಪಾನ್​ನಿಂದ ಪಶ್ಚಿಮ ಯೂರೋಪ್​​ನಲ್ಲಿರೋ ಜರ್ಮನಿ ಮಧ್ಯೆ ಬರೋಬ್ಬರಿ 5,500 ಕಿಲೋಮೀಟರ್​ಗಳ ಅಂತರವಿದೆ.  ಇದರಿಂದ ಖುದ್ದು ಪಾಕ್​ ಅಧಿಕಾರಿಗಳು ಪೆಚ್ಚುಮೋರೆ ಹಾಕಿಕೊಳ್ಳುವ ಪ್ರಸಂಗ ನಡೆದಿದೆ.

ಅಷ್ಟೇ ಅಲ್ಲ ಈ ಬಗ್ಗೆ ವ್ಯಂಗ್ಯವಾಗಿ ಟೀಕಾ ಪ್ರಹಾರವನ್ನೂ ನಡೆಸಿರೋ ಅಲ್ಲಿನ ವಿಪಕ್ಷ ನಾಯಕ ದಿವಂಗತ ಬೆನಜಿರ್ ಭುಟ್ಟೋ ಪುತ್ರ ಬಿಲಾವಲ್ ಅಲಿ ಭುಟ್ಟೋ, ಎಂಥ ಮುಜುಗರದ ಸ್ಥಿತಿ ಇದು. ಬರೀ ಕ್ರಿಕೆಟ್​ ಆಡಲು ಬರುತ್ತದೆ ಎಂಬ ಕಾರಣಕ್ಕೆ ಆಕ್ಸಫರ್ಡ್​ ಯೂನಿವರ್ಸಿಟಿ ಅವಕಾಶ ಕೊಟ್ಟಾಗ ಹೀಗೆ ಆಗುತ್ತದೆ ಅಂತಾ ಟ್ವೀಟ್ ಮಾಡಿ ಇಮ್ರಾನ್​ ಖಾನ್ ಕಾಲು ಎಳೆದಿದ್ದಾರೆ. ಅವರಿಗಷ್ಠೇ ಅಲ್ಲ ಹಲವು ಪಾಕ್​ ನಾಗರಿಕರು ಕೂಡ ತಮ್ಮ ಪ್ರಧಾನಿ ವಿರುದ್ಧ ಹಲವು ವ್ಯಂಗ್ಯಾಸ್ತ್ರ ಪ್ರಯೋಗಿಸಿ ಟ್ವೀಟ್​ಗಳ ಮಳೆಯನ್ನೇ ಸುರಿಸಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv