‘ಪಡ್ಡೆಹುಲಿ’.. ಇವನು ಕನ್ನಡದ ‘ರಾಕ್​ಸ್ಟಾರ್’​..!

ಸಿನಿಮಾ: ಪಡ್ಡೆಹುಲಿ
ತಾರಾಗಣ: ಶ್ರೇಯಸ್​, ನಿಶ್ವಿಕಾ ನಾಯ್ಡು, ರವಿಚಂದ್ರನ್​, ಸುಧಾರಾಣಿ, ಅಮಿತ್​,
ನಿರ್ದೇಶನ: ಗುರುದೇಶ್​ಪಾಂಡೆ
ಸಂಗೀತ: ಅಜನೀಶ್​ ಲೋಕನಾಥ್​
ನಿರ್ಮಾಣ: ತೇಜಶ್ವಿನಿ ಎಂಟರ್ಪ್ರೈಸಸ್​


ಗಾಯಕ ಆಗಬೇಕು ಅನ್ನೋದು ಸುಮ್ಮನೆಯ ಮಾತಲ್ಲ. ಜ್ಞಾನ, ಸಂಗೀತ ಪ್ರೀತಿ, ಅಚಲ ನಂಬಿಕೆ ಇರಬೇಕು. ಸಾವಿರಾರು ಗಾಯಕರ ನಡುವೆ ಸ್ವಂತ ಹಾದಿ ಸೃಷ್ಟಿಸಿಕೊಳ್ಳುವುದು ಸಾಹಸವೇ. ಸಂಗೀತ, ಗಾಯನದ ಸುತ್ತಲೂ ಕನ್ನಡದಲ್ಲಿ ಒಂದಷ್ಟು ಸಿನಿಮಾ ಬಂದಿದೆ. ಹೊಸಬೆಳಕು, ಲಾಲಿಹಾಡು, ಹಠವಾದಿ.. ಇವು ಒಂದಷ್ಟು ಉದಾಹರಣೆಗಳಷ್ಟೇ. ಆನಂತರದಲ್ಲಿ ಇಂತಹ ಕಥೆಯಿರುವ ಸಿನಿಮಾಗಳೇ ಬರಲಿಲ್ಲ. ಆದ್ರೀಗ ಮಾಡ್ರನ್​ ಹುಡುಗರ ಸೆಳೆಯೋ ‘ಪಡ್ಡೆಹುಲಿ’ ಎಂಟ್ರಿಕೊಟ್ಟಿದೆ.

ಒನ್​ಲೈನ್​ ಸ್ಟೋರಿ:
ಸಿನಿಮಾದ ನಾಯಕ ಸಂಪತ್​ಕುಮಾರನಿಗೆ ಸಂಗೀತವೇ ಉಸಿರು. ‘ಸರಿಗಮ….’ ಬಿಟ್ಟು ಇನ್ಯಾವುದರ ಮೇಲೂ ಆಸಕ್ತಿಯಿಲ್ಲ. ಚಿಕ್ಕ ವಯಸ್ಸಿಂದಲೂ ಗಾಯಕ ಆಗಬೇಕು. ಸಂಗೀತದಲ್ಲಿ ಸಾಧಿಸಬೇಕೆಂಬ ಕನಸು. ಮನೆಯಲ್ಲಿ ತಂದೆ- ತಾಯಿ ಮಗನ ಕನಸಿಗೆ ವಿರುದ್ಧ. ಮೊದಲು ಓದು, ಆನಂತರ ಸಂಗೀತ ಎಂಬುದು ತಂದೆಯ ಮಾತು. ಆದರೆ ಮಗನದ್ದು ಒಂದೇ ಗುರಿ… ಅದೇ ಸಂಗೀತ. ಆದರೆ ಸಂಪತ್​ ತಂದೆ-ತಾಯಿ ಎಂದಿಗೂ ಮಗನ ಆಸೆಯನ್ನು ತುಳಿಯಲಿಲ್ಲ. ಈ ಹಗ್ಗ-ಜಗ್ಗಾಟದ ನಡುವೆ ‘ದುರ್ಗದ ಹುಲಿ’, ದಾವಣಗೆರೆಯ ಹಾಸ್ಟೆಲ್​ ಸೇರುತ್ತಾನೆ. ಆ ಮೂರು ವರ್ಷದ ಕಾಲೇಜ್​ ಲೈಫಿನಲ್ಲಿ ಱಗಿಂಗ್​, ಲವ್​, ಆ್ಯಕ್ಷನ್, ಬ್ರೇಕಪ್​… ಎಲ್ಲವೂ ನಡೆಯುತ್ತೆ. ಆದರೂ ಸಂತಪ್​​ ಮನಸಿನಲ್ಲಿದ್ದ ಮ್ಯೂಸಿಕ್​ ಪ್ರೀತಿ ಕಡಿಮೆಯಾಗಲ್ಲ. ಜಾನಪದ ಸಾಹಿತ್ಯಕ್ಕೆ ಱಪ್​ ಟಚ್ ಕೊಟ್ಟು, ರಾಕ್​ಸ್ಟಾರ್​ ಆಗುವ ಕನಸು ಕಾಣ್ತಾನೆ. ಒಂದೆಡೆ ಪ್ರಾಣಕ್ಕಿಂತ ಪ್ರೀತಿಸೋ ಸಂಗೀತ, ಮತ್ತೊಂದೆಡೆ ತನಗೆ ಉಸಿರಿನಂತಿರೋ ಹುಡುಗಿ. ಇಬ್ಬರನ್ನೂ ಉಳಿಸಿಕೊಳ್ಳಬೇಕಾದ ಸ್ಥಿತಿ ಬರುತ್ತೆ. ಅಪ್ಪ- ಅಮ್ಮನ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಈ ಜಂಜಾಟವನ್ನೆಲ್ಲಾ ಮೀರಿ ಸಂತಪ್​ ರಾಕ್​ಸ್ಟಾರ್​ ಆಗ್ತಾನಾ..? ತನ್ನ ಪ್ರೀತಿಯನ್ನು ಉಳಿಸಿಕೊಳ್ತಾನಾ..? ಎಂಬುದೇ ಪಡ್ಡೆಹುಲಿ ರಾಕಿಂಗ್ ಸ್ಟೋರಿ.

ಪ್ಲಸ್​ &​ ಮೈನಸ್​:
‘ಪಡ್ಡೆಹುಲಿ’ ಸ್ಟ್ರೈಟ್ ಸಿನಿಮಾವಂತೂ ಅಲ್ಲ. ತಮಿಳಿನ ‘ಮೀಸಯ ಮುರುಕು’ ಸಿನಿಮಾದ ಇನ್​ಸ್ಪಿರೇಷನ್. ನಿರ್ದೇಶಕ ಗುರುದೇಶ್​ಪಾಂಡೆ ಒಂದೊಳ್ಳೆ ಟೈಂನಲ್ಲಿ, ಒಂದೊಳ್ಳೆ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ಕಥೆಯಂತೂ ಸೂಪರ್ ಆಗಿದೆ. ಯುವಶಕ್ತಿಯನ್ನು ಎಚ್ಚರಿಸುವಂತಹ ಅಂಶ ಸಿನಿಮಾದಲ್ಲಿದೆ. ಆದರೆ ತಾಂತ್ರಿಕವಾಗಿ ಮತ್ತಷ್ಟು ಶ್ರೀಮಂತಿಕೆ ಇದ್ದಿದ್ದರೇ ‘ಪಡ್ಡೆಹುಲಿ’ ಮತ್ತೊಂದು ಮಟ್ಟದಲ್ಲಿರುತ್ತಿತ್ತು. ಫಸ್ಟ್​ ಹಾಫ್​ ಕೊಂಚ ಸ್ಲೋ ಎನಿಸಿದರೂ, ಸೆಕೆಂಡ್​​ ಹಾಫ್​ನಲ್ಲಿನ ತಿರುವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾಯಕ ಶ್ರೇಯಸ್ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟಿಸಿದ್ದಾರೆ. ನಟನೆ, ಡ್ಯಾನ್ಸ್​ ಜೊತೆಗೆ ಆ್ಯಕ್ಷನ್​ನಲ್ಲಿ ಪ್ರಾಮಿಸಿಂಗ್ ಎನಿಸಿದ್ದಾರೆ. ತಂದೆಯ ಪಾತ್ರದಲ್ಲಿ ‘ಕ್ರೇಜಿಸ್ಟಾರ್’​ ರವಿಚಂದ್ರನ್​ ಸ್ಕ್ರೀನ್​ನಲ್ಲಿ ಇದ್ದಷ್ಟೂ ಖುಷಿ ನೀಡುತ್ತಾರೆ. ತುಂಬಾ ವರ್ಷಗಳ ನಂತರ ಸುಧಾರಾಣಿ- ರವಿಚಂದ್ರನ್​ ನೋಡೋದೆ ಚೆಂದ. ನಾಯಕಿ ನಿಶ್ವಿಕಾ ನಾಯ್ಡು ಎಂದಿನಂತೆ ಕ್ಯೂಟಾಗಿ ನಟಿಸಿದ್ದಾರೆ. ಶ್ರೇಯಸ್​- ನಿಶ್ವಿಕಾ ಕೆಮಿಸ್ಟ್ರಿ ಲವ್​- ಸೆಂಟಿಮೆಂಟ್​ ಎರಡರಲ್ಲೂ ಹಿತ ಎನಿಸುತ್ತದೆ. ಉಳಿದಂತೆ ‘ಪವರ್ ಸ್ಟಾರ್​’ ಪುನೀತ್​ ಮತ್ತು ರಕ್ಷಿತ್​ ಶೆಟ್ಟಿ ಗೆಸ್ಟ್​ರೋಲ್​ನಲ್ಲಿ ಬಂದು ಚಪ್ಪಾಳೆ ಗಿಟ್ಟಿಸುತ್ತಾರೆ. ಕ್ಯಾಮೆರಾವರ್ಕ್​, ಮೂಲ ಸಿನಿಮಾಗೆ ಹೋಲಿಸಿಕೊಂಡರೇ ಅಷ್ಟೊಂದು ಇಷ್ಟವಾಗುವುದಿಲ್ಲ. ಅಜನೀಶ್​ ಸಂಗೀತ ಕಥೆಗ ಪೂರಕವಾಗಿದೆ.

ಒಮ್ಮೆಯಾದ್ರೂ ನೋಡಬಹುದು..!
ಪಡ್ಡೆಹುಲಿ ಸಿನಿಮಾದ ಕತೆಯೇ ಇಂಟರೆಸ್ಟಿಂಗ್​. ಅದ್ರಲ್ಲೂ ಇಂದಿನ ಯುವಜನತೆ ನೋಡಬೇಕಾದ ಸಿನಿಮಾ. ಯಾವುದು ನಮ್ಮತನ..? ಅಭ್ಯಾಸ- ಹವ್ಯಾಸ ಹೇಗಿರಬೇಕು..? ಸಾಧಿಸುವ ಛಲ ಹೇಗಿರಬೇಕು..? ಜೀವನ ಎಂದರೇನು..? ಎಂಬಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುತ್ತ ಸಾಗುತ್ತದೆ. ಫಸ್ಟ್​ಹಾಫ್​ ಕೊಂಚ ಮಟ್ಟಿಗೆ ಎಳೆದಿದ್ದಾರೆ ಎನಿಸಿದ್ರೂ, ಸೆಕೆಂಡ್​ ಹಾಫ್​ನಲ್ಲಿ ನೋಡಿದಕ್ಕೂ ಸಾರ್ಥಕ ಎನಿಸುತ್ತದೆ. ಆದ್ದರಿಂದ ‘ಪಡ್ಡೆಹುಲಿ’ಯ ಪ್ಯಾರ್​, ಪ್ರೇಮ್​, ಮೊಹಬ್ಬತನ್ನು ಕಣ್ತುಂಬಿಕೊಳ್ಳಬಹುದು.

ವಿಮರ್ಶೆ: ಲೋಕೇಶ್​ ಡಿ.