ನಮ್ಮ ಹುಲಿ ಮುಖ್ಯಮಂತ್ರಿಯಾಗಲು ತುದಿಗಾಲ ಮೇಲೆ ನಿಂತಿದೆ..!

ಯಾದಗಿರಿ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಚರ್ಮ ದಪ್ಪ ಇದ್ದು, ಚೂಪಾದ ವಸ್ತುಗಳಿಂದ ಚುಚ್ಚಿದರೂ ಎನೂ ಪ್ರಯೋಜ ಆಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿರೋಧ ಪಕ್ಷದವರು ಹಾಗೂ ಮಾಧ್ಯಮದವರನ್ನು ತೆಗಳೋದೆ ಒಂದು ಕೆಲಸವಾಗಿದೆ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಕಿಡಿಕಾರಿದ್ದಾರೆ.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಮಾಡದೇ ಕಾಲಹರಣ ಮಾಡುತ್ತಿರುವ ಈ ಸರ್ಕಾರ ಇದಾಗಿದ್ದು, ಜನಪರ ಕೆಲಸ ಮಾಡಲು ಆಗದಿದ್ದರೆ ಕೆಳಗಿಳಿದು ಬರಲಿ.ನಮ್ಮ ಹುಲಿ (ಯಡಿಯೂರಪ್ಪ) ಮುಖ್ಯಮಂತ್ರಿಯಾಗಲು ತುದಿಗಾಲ ಮೇಲೆ ನಿಂತಿದೆ. ಈಗ ರಾಜ್ಯದಲ್ಲಿ ಕುಮಾರಸ್ವಾಮಿ ಬದಲು ಯಡಿಯೂರಪ್ಪ ಅಧಿಕಾರದಲ್ಲಿದ್ದರೆ, ಯಾವುದೇ ಸಮಸ್ಯೆಗಳೇ ಬರುತ್ತಿರಲಿಲ್ಲ. ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಬರೀ ಸಮಸ್ಯೆಗಳೇ ತುಂಬಿವೆ. ಅಲ್ಲದೇ, ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ರಾಜುಗೌಡ ಹರಿಹಾಯ್ದರು.
ಇನ್ನಾದರೂ ಸರ್ಕಾರದ ನೇತೃತ್ವವಹಿಸಿರುವ ಕುಮಾರಸ್ವಾಮಿಯವರು, ಅಭಿವೃದ್ಧಿ ವಂಚಿತ ಉತ್ತರ ಕರ್ನಾಟಕವನ್ನು ಕಡೆಗಣಿಸಿ ಮಾತನಾಡೊದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸ ಬೇಕು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹೆಚ್ಚು ದಿನ ಇರಲ್ಲ. ಮತ್ತೆ ನಮ್ಮ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಇನ್ನು ಬಿಜೆಪಿ ಪಕ್ಷದ ಎಲ್ಲ ಕಾರ್ಯಕರ್ತರು ಒಂದಾಗಿದ್ದೇವೆ, ಬರುವ ಲೋಕಸಭಾ ಚುನಾವಣೆಯಲ್ಲಿ ಜಯ ನಮ್ಮದೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆಂದು ಎಂದು ಶಾಸಕ ರಾಜುಗೌಡ ಭವಿಷ್ಯ ನುಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv