₹4 ಕೋಟಿಯ ಮಾನನಷ್ಟ ಮೊಕದ್ದಮೆ ಗೆದ್ದ ಆಸ್ಕರ್​ ವಿಜೇತ ನಟ..!

ಸಿಡ್ನಿ: ಆಸ್ಟ್ರೇಲಿಯಾ ನಟ, ಆಸ್ಕರ್​ ವಿಜೇತ ಜೆಫ್ರಿ ರಶ್​ ತಮ್ಮ​ ವಿರುದ್ಧ ಬರೆಯಲಾಗಿದ್ದ ಲೇಖನವನ್ನ ವಿರೋಧಿಸಿ ನಡೆಸಿದ ಕಾನೂನು ಹೋರಾಟದಲ್ಲಿ ಜಯ ಗಳಿಸಿದ್ದಾರೆ. ಕೆಲ ದಿನಗಳ ಹಿಂದೆ ವಿದೇಶಿ​ ಟ್ಯಾಬ್ಲಾಯ್ಡ್​​, ಜೆಫ್ರಿ ರಶ್​ ವಿರುದ್ಧ ಅವಹೇಳನಕಾರಿ ಲೇಖನವೊಂದನ್ನ ಪ್ರಕಟಿಸಿತ್ತು. ಜೆಫ್ರಿ ರಶ್​​ ಸಿನಿಮಾವೊಂದರ ಶೂಟಿಂಗ್​ ವೇಳೆ ಸಹ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬರೆದಿತ್ತು. ಈ ಟ್ಯಾಬ್ಲಾಯ್ಡ್​ ವಿರುದ್ಧ ಸಮರ ಸಾರಿ ಕೇಸ್ ದಾಖಲಿಸಿದ್ದ ಜೆಫ್ರಿ, ನನ್ನ ಹೆಸರಿಗೆ ಮಸಿ ಬಳೆಯುವ ಕೆಲಸವಾಗಿದೆ. ಈ ಆರೋಪದಿಂದ ನನ್ನ ಕರಿಯರ್​ಗೆ ಕಪ್ಪು ಚುಕ್ಕೆ ಬಂದಿದ್ದು, ನನಗೆ ಸಿನಿಮಾ ಆಫರ್​ಗಳು ಕಡಿಮೆ ಆಗಿವೆ ಎಂದೇಳಿ ಕೋರ್ಟ್​ ಮೆಟ್ಟಿಲೇರಿದ್ದರು. ಆಸ್ಕರ್​ ವಿಜೇತನ ಪ್ರಕರಣವಾಗಿದ್ದರಿಂದ ಗಂಭೀರವಾಗಿ ವಿಚಾರಣೆ ನಡೆಸಿದ ಸಿಡ್ನಿ ಕೋರ್ಟ್​, ಜೆಫ್ರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ. ಪ್ರಕರಣ ಸಂಬಂಧ ಸಾಕ್ಷ್ಯ ಒದಗಿಸಲು ಟ್ಯಾಬ್ಲಾಯ್ಡ್​ ವಿಫಲವಾದ ಹಿನ್ನೆಲೆ, ಜೆಫ್ರಿಗೆ ಬರೋಬ್ಬರಿ AU$850,000 (₹4 ಕೋಟಿ) ಹಣವನ್ನ ನೀಡುವಂತೆ ಟ್ಯಾಬ್ಲಾಯ್ಡ್​ ಮುಖ್ಯಸ್ಥರಿಗೆ ಆದೇಶಿಸಿದೆ.