‘ಟು ಮಿನಿಟ್ಸ್​’ ಅಲ್ಲಾ ಸ್ವಾಮಿ, ಇದು 4ಸಾವಿರ ವರ್ಷದ ನೂಡಲ್ಸ್!

ನೂಡಲ್ಸ್​.. ಅದೇ ಉದ್ದುದ್ದಕ್ಕೆ ದಾರದಂತೆ ಹರಿದುಬರುತ್ತದಲ್ಲಾ ಅದು ಯಾರಿಗೆತಾನೆ ಗೊತ್ತಿಲ್ಲ, ಯಾರುತಾನೇ ತಿಂದಿಲ್ಲ ಹೇಳಿ. ನೂಡಲ್ಸ್ ಅನ್ನು ಅಚ್ಚಕನ್ನಡದಲ್ಲಿ ಶಾವಿಗೆ ಅಂದ ತಕ್ಷಣ ಅಯ್ಯೋ ಅದು ನಮ್ಮ ಅಜ್ಜಿ ಮುತ್ತಜ್ಜಿ ಕಾಲದಿಂದಲೂ ಇರುವ ಅದ್ಭುತ ತಿನಿಸು ಬಿಡಿ ಅನ್ನುತ್ತಾರೆ ಜನ. ಒಟ್ನಲ್ಲಿ ಹೇಳಬೇಕೆಂದರೆ ಸರ್ವಾಂತರ್ಯಾಮಿ, ಸಾರ್ವಕಾಲಿಕ ಎನ್ನಬಹುದು. ಆದ್ರೂ ನೂಡಲ್ಸ್​ ತಯಾರಿ ಯಾವಾಗಿನಿಂದ ಶರುವಾಯಿತು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ನೂಡಲ್ಸ್​ ಕನಿಷ್ಠ 4,000 ವರ್ಷದಷ್ಟು ಹಳೆಯದ್ದು! ಚೀನಾದಲ್ಲಿ ಖಿಂಗೈ ಎಂಬ ಪ್ರಾಂತ್ಯದಲ್ಲಿ 2002ರಲ್ಲಿ 4,000 ವರ್ಷ ಹಳೆಯ ನೂಡಲ್ಸ್​ ಪತ್ತೆ ಹಚ್ಚಲಾಗಿದೆ. ಮೂರು ಮೀಟರ್​ ಆಳದಲ್ಲಿ ಕಲ್ಲುಗಳ ಮಧ್ಯೆ ಮಣ್ಣಿನ ಪಾತ್ರೆಯಲ್ಲಿ ಅಂದಾಜು 4 ಸಾವಿರ ವರ್ಷ ಹಳೆಯ ನೂಡಲ್ಸ್​ ಪತ್ತೆಯಾಗಿದೆ. ಅಂದು ಸಂಭವಿಸಿದ ಭೀಕರ ಭೂಕಂಪದ ಪ್ರದೇಶದಲ್ಲಿ ಈ ಮಣ್ಣಿನ ಪಾತ್ರೆ ಪತ್ತೆಯಾಗಿತ್ತು. ಚೀನಾದ ಹನ್​ ಆಳ್ವಿಕೆಯಲ್ಲಿ ಕ್ರಿಸ್ತ ಶಕ 25 ಮತ್ತು 225ನೇ ಶತಮಾನದಲ್ಲಿ ಬರೆಯಲಾಗಿರುವ ಪುಸ್ತಕದಲ್ಲಿ ಈ ನೂಡಲ್ಸ್​ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಅಲ್ಲಿಂದ ಮುಂದಕ್ಕೆ ವಿದ್ಯಾರ್ಥಿಗಳು, ಪ್ರವಾಸಿಗರು, ಯುದ್ಧ ಕೈದಿಗಳು ಈ ನೂಡಲ್ಸ್​ ಅನ್ನು ವಿಶ್ವಕ್ಕೆ ಪರಿಚಯಿಸತೊಡಗಿದರು ಎಂದು ವರದಿಯಾಗಿದೆ.

ಅಸಲಿಗೆ, ಈ ನೂಡಲ್ಸ್​ ಎಂಬ ಹೆಸರು ಜರ್ಮನಿಯದ್ದು. ಒಂದು ಮಾಹಿತಿಯ ಪ್ರಕಾರ ನೂಡಲ್ಸ್ ಏಷ್ಯಾ ಮೂಲದ್ದು ಅನ್ನುತ್ತಾರಾದರೂ ಹೆಸರು ಮಾತ್ರ ಜರ್ಮನಿಯದ್ದಂತೆ. nudel ಎಂಬ ಜರ್ಮನಿ ಪದದಿಂದ noodle ಹುಟ್ಟುಕೊಂಡಿದೆಯಂತೆ! ಜರ್ಮನಿ ಭಾಷೆಯಲ್ಲಿ knödel ಅಂದ್ರೆ dumpling ಅಂತಾ ಕರೆಯುತ್ತಾರೆ. ಡಂಪ್ಲಿಂಗ್ ಹಬೆಯಿಂದ ಮಾಡಿದ ತಿನಿಸು. ಲ್ಯಾಟಿನ್ ಭಾಷೆಯಲ್ಲಿ nodus ಅಂದ್ರೆ ಗಂಟು ಹಾಕಿರುವ ಎಂಬರ್ಥವೂ ಇದೆ.

ಈ ನೂಡಲ್ಸ್​ ಎಂಬುದು ಹಬೆಯಿಂದ, ಸಾವಕಾಶವಾಗಿ, ಶ್ರಮದಾಯಕವಾಗಿ ಮಾಡಿದ ಒಂದು ಅದ್ಭುತ ತಿನಿಸು. ಆದ್ರೆ ಈ 4 ಸಾವಿರ ವರ್ಷಗಳಲ್ಲಿ ಜಗತ್ತಿನಲ್ಲಿ ಹಸಿವಿನ ಪ್ರಮಾಣ ಅಗಾಧವಾಗುತ್ತಿದ್ದಂತೆ ಆ ಹಸಿವನ್ನು ತಣಿಸಲು ದಿಢೀರ್​ ನೂಡಲ್ಸ್​ ಆಗಿಯೂ ಪರಿವರ್ತನೆಗೊಂಡಿತು. ಎರಡನೆಯ ವಿಶ್ವ​ ಯುದ್ಧದಲ್ಲಿ ಜಪಾನ್​ ಏಕಾಂಗಿಯಾಗಿ ಸೋತ ಬಳಿಕ, ಆಹಾರಕ್ಕಾಗಿ ಹಾಹಾಕಾರ ಎದ್ದಿತು. ಜಗತ್ತಿನ ದೊಡ್ಡಣ್ಣನೇ ಎಲ್ಲರಿಗೂ ಅನ್ನದಾತನಾಗತೊಡಗಿದ್ದ. ಆದರೆ ಜಪಾನಿನ ವ್ಯಾಪಾರಿಯೊಬ್ಬರು ದೊಡ್ಡಣ್ಣನ ದಾಸ್ಯದಿಂದ ಹೊರಬಂದು, ಹೇಗಾದರೂ ಮಾಡಿ ತನ್ನ ಜನರ ಹಸಿವನ್ನು ನೀಗಿಸಬೇಕು ಎಂದು ಪಣತೊಟ್ಟು, ಕೆಲಸ ಮಾಡತೊಡಗಿದ್ದ. ಕೊನೆಗೂ ಆತ ನೂಡಲ್ಸ್​ ರೂಪದಲ್ಲಿ ಸಾಫಲ್ಯ ಕಂಡಿದ್ದ. ಅದರೊಂದಿಗೆ, 1958ರಲ್ಲಿ ಮೊದಲ ಬಾರಿಗೆ ಇನ್ಸ್​ಟೆಂಟ್​ ನೂಡಲ್ಸ್ ಜನ್ಮ ತಾಳಿತ್ತು.

ನೂಡಲ್ಸ್ ಅಂದ ತಕ್ಷಣ ಅದು ಚೈನೀಸ್​ ನೂಡಲ್ಸ್ ಅಂತೀವಿ, ಆದ್ರೆ ಇನ್ಸ್​ಟೆಂಟ್​ ನೂಡಲ್ಸ್ ತಯಾರಾಗಿದ್ದು ಜಪಾನಿನಲ್ಲಿ! ಇನ್ನು ಜಪಾನಿನಲ್ಲಿ ಮೂರು ದೊಡ್ಡ ಪ್ರಮಾಣದ ಇನ್ಸ್​ಟೆಂಟ್​ ನೂಡಲ್ಸ್ ಸಂಗ್ರಹಾಲಗಳಿವೆ! 2ನೇ ವಿಶ್ವ ಯುದ್ಧದ ವೇಳೆ ಹಸಿವಿನ ಕಷ್ಟ ಅನುಭವಿಸಿದ್ದ ಜಪಾನೀಯರು, ತಮ್ಮ ಅತ್ಯದ್ಭುತ ಆವಿಷ್ಕಾರವೆಂದ್ರೆ ಈ ಇನ್ಸ್​ಟೆಂಟ್​ ನೂಡಲ್ಸ್ ಅಂತಾ ಸ್ವಾಭಿಮಾನದಿಂದ ಎದೆತಟ್ಟಿಕೊಂಡು ಹೇಳ್ತಾರೆ! ಆದ್ರೆ ಜಗತ್ತು ಇಂದಿಗೂ ಹೈಸ್ಪೀಡ್​ ಟ್ರೈನ್​ಗಳು, ಲ್ಯಾಪ್​ಟಾಪ್​​ಗಳು, ಕರೋಕೆಗಳು ಜಪಾನಿನ ಕೊಡುಗೆ ಎಂದು ಅಂದುಕೊಳ್ಳುತ್ತದೆ!

ನೂಡಲ್ಸ್ ಬಗ್ಗೆ ಮತ್ತೊಂದಿಷ್ಟು ಸ್ವಾರಸ್ಯಕರ ಸಂಗತಿಗಳು:
ಸಾಮಾನ್ಯವಾಗಿ ನೂಡಲ್ಸ್ ಅನ್ನು ಬಾಯೊಳಕ್ಕೆ ಎಳೆದುಕೊಂಡು ತಿನ್ನುವಾಗ ಸೊರಸೊರ ಅಂತಾ ಚೀಪ್ಕೊಂಡು ತಿಂದ್ರೆ ಅಂಥವರನ್ನು ಜನ ಚೀಪ್​ ಆಗಿ ನೋಡ್ತಾರೆ! ಟೇಬಲ್​ ಮ್ಯಾನರ್ಸ್​ ಇಲ್ಲದವ್ರು ಅಂತಾ ಕೆಕ್ಕರಿಸಿಕೊಂಡು ನೋಡ್ತಾರೆ. ಆದ್ರೆ ಹಸಿವಿನ ಮಹಾತ್ಮೆ ಏನು ಎಂಬುದನ್ನು ಬಲ್ಲ ಜಪಾನೀಯರು ಮಾತ್ರ, ಅದಲ್ಲೆ ಆಗಾಕಿಲ್ಲ.. ನೂಡಲ್ಸ್ ಅನ್ನು ಸೊರಸೊರ ಅಂತಾ ಶಬ್ದಾ ಮಾಡಿಕೊಂಡು ತಿನ್ನೋದೇ ಶಿಷ್ಟಾಚಾರ. ಅದರಲ್ಲೇ ಗಮ್ಮತ್ತು ಇರೋದು ಎಂದು ಅದೇ ತುಂಟಿಯಂಚಿನಲ್ಲಿ ನಗೆ ಸೂಸುತ್ತದೆ.

ಚೀನಾದಲ್ಲಿ ಈ ಉದ್ದುದ್ದ ಎಳೆಯಾಕಾರದ ನೂಡಲ್ಸ್ ಬಗ್ಗೆ ಒಂದು ನಂಬಿಕೆಯಿದೆ. ನೂಡಲ್ಸ್ ಅಂದ್ರೆ.. ದೀರ್ಘ ಬಾಳಿಕೆಯಂತೆ! ಈ ನೂಡಲ್ಸ್​ನಲ್ಲಿದೆಯಂತೆ ದೀರ್ಘಾಯುಷ್ಯದ ಗುಟ್ಟು! ಹೊಸ ವರ್ಷಾಚರಣೆಯಲ್ಲಿ ನೂಡಲ್ಸ್ ವಿಶೇಷ ತಿನಿಸಾಗಿ ಇರಲೇಬೇಕಂತೆ. ಎಲ್ಲಕ್ಕಿಂತ ಹೆಚ್ಚಿಗೆ ನೂಡಲ್ಸ್​ ಅನ್ನು ಮುರಿದು ತಿಂದ್ರೆ ಆಯಸ್ಸು ಸಹ ಮುರಿದುಹೋಗುತ್ತದೆ, ಹಾಗಾಗಿ ಉದ್ದುದ್ದ ನೂಡಲ್ಸ್​ ಅನ್ನು ಹಾಗೇ ತಿನ್ನಬೇಕಂತೆ!

ಅಂದಹಾಗೆ ಗಿನಿಸ್​ ರೆಕಾರ್ಡ್​ ಪ್ರಕಾರ ವಿಶ್ವದ ಅತಿ ಉದ್ಧನೆಯ ನೂಡಲ್ಸ್​ 3 ಕಿ.ಮೀ. ಅಳತೆಯದ್ದಾಗಿದೆ. ಚೀನಾದ ಆಹಾರ ತಯಾರಿಕಾ ಕಂಪನಿಯೊಂದು 3,084 ಮೀಟರ್​ ಉದ್ದದ ನೂಡಲ್ಸ್ ತಯಾರಿಸಿ, ರೆಕಾರ್ಡ್ ಮಾಡಿತ್ತು. ತೀರ್ಪುಗಾರರು ಮೂರು ಗಂಟೆ ಕಾಲ ಅದನ್ನು ಅಳೆದೂ, ಸುರಿದೂ ಯಸ್​ ಇದು ವಿಶ್ವ ದಾಖಲೆಯೇ ಸರಿ ಅಂದಿದ್ದರು!

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv