ಎವಿಎಂ ಬೇಡ, ಬ್ಯಾಲೆಟ್​​ ಪೇಪರ್​ ಮತದಾನ ನಡೆಯಲಿ: ಮಹಾಘಟಬಂಧನ್​​ ನಾಯಕರ ಆಗ್ರಹ

ನವದೆಹಲಿ: ಎಲೆಕ್ಟ್ರಾನಿಕ್​ ವೋಟಿಂಗ್​ ಮಷೀನ್​ ಬಗ್ಗೆ ಮತ್ತೆ ವಿರೋಧಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದು, ಬ್ಯಾಲೆಟ್​​ ಪೇಪರ್​​ನಲ್ಲಿ ಮತದಾನ ನಡೆಯಬೇಕೆಂದು ಆಗ್ರಹಿಸಿವೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಇವಿಎಂನಲ್ಲಿ ಹಲವು ದೋಷಗಳು ಕಂಡುಬಂದಿವೆ ಎಂದು ಆರೋಪಿಸಿ ಇಂದು 6 ಪ್ರಮುಖ ವಿರೋಧ ಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ನಡೆಸಿದ್ರು. ಬಳಿಕ ಮಹಾಘಟಬಂಧನ್​ ನಾಯಕರು ಸುದ್ದಿಗೋಷ್ಟಿ ನಡೆಸಿದ್ರು.

ಈ ವೇಳೆ ಮಾತನಾಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ನಮಗೆ ಇವಿಎಂ ಬಗ್ಗೆ ಅನುಮಾನಗಳಿವೆ. ಪೇಪರ್​​ ಟ್ರಯಲ್​ ಮಷೀನ್​ಗಳ ಮೂಲಕ ಮಾತ್ರ ಮತದಾರ ತನ್ನ ವೋಟ್​ ಬಗ್ಗೆ ವಿಶ್ವಾಸ ಹೊಂದಬಹುದು. ಜರ್ಮನಿಯಂತಹ ಮುಂದುವರಿದ ರಾಷ್ಟ್ರ ಕೂಡ ಪೇಪರ್​ ಬ್ಯಾಲೆಟ್​​​ಗೆ ಬದಲಾವಣೆ ಮಾಡಿಕೊಂಡಿದೆ. ನೆದರ್​ಲೆಂಡ್ಸ್​ ಕೂಡ ಬ್ಯಾಲೆಟ್​​ ಪೇಪರ್​ ಬಳಸುತ್ತಿದೆ ಎಂದರು.

ಇನ್ನು ಏಪ್ರಿಲ್ 11ರಂದು ಮೊದಲ ಹಂತಹ ಲೋಕಸಭಾ ಚುನಾವಣೆ ದಿನವೇ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. “ಈ ವೇಳೆ ರಾಜ್ಯಾದ್ಯಂತ ಸಾಕಷ್ಟು ಇವಿಎಂಗಳಲ್ಲಿ ದೋಷ ಕಂಡುಬಂದಿದ್ದು, ಈ ಚುನಾವಣೆ ಒಂದು ದೊಡ್ಡ ಗೊಂದಲ, ದೊಡ್ಡ ಅವ್ಯವಸ್ಥೆ ಹಾಗೂ ದೊಡ್ಡ ಪ್ರಹಸನವಾಗಿಹೋಯ್ತು. ಅಧಿಕೃತ ಮಾಹಿತಿಯ ಪ್ರಕಾರ ರಾಜಯದಲ್ಲಿ 4583 ಇವಿಎಂಗಳಲ್ಲಿ ದೋಷ ಕಂಡುಬಂದಿದೆ” ಎಂದು ಚಂದ್ರಬಾಬು ನಾಯ್ಡು ಹೇಳಿದ್ರು.

ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿದ ನಾಯ್ಡು, ಇಂತಹ ಬೇಜವಾಬ್ದಾರಿಯುತ, ನಿಷ್ಪ್ರಯೋಜಕ ಚುನಾವಣಾ ಆಯೋಗವನ್ನ ನಾನು ಎಲ್ಲೂ ನೋಡಿಲ್ಲ. ನೀವು ಪ್ರಜಾಪ್ರಭುತ್ವವನ್ನ ಗೇಲಿ ಮಾಡ್ತಿದ್ದೀರಾ? ಚುನಾವಣಾ ಆಯೋಗ ಬಿಜೆಪಿಯ ಬ್ರಾಂಚ್​ ಆಫೀಸ್​ ಆಗಿದೆ ಎಂದು ಕಿಡಿ ಕಾರಿದ್ರು.

ಇದೇ ವೇಳೆ ಕಾಂಗ್ರೆಸ್​​ನ ಅಭಿಷೇಕ್​ ಸಿಂಘ್ವಿ ಮಾತನಾಡಿ, ಮೊದಲ ಹಂತದ ಚುನಾವಣೆ ಬಳಿಕ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಚುನಾವಣಾ ಆಯೋಗ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ನಮಗೆ ಅನ್ನಿಸುತ್ತಿದೆ. ನೀವು ಎಕ್ಸ್​​ ಪಾರ್ಟಿಯ ಮುಂದಿರೋ ಬಟನ್ ಒತ್ತಿದ್ರೆ ವೈ ಪಾರ್ಟಿಗೆ ವೋಟ್​ ಹೋಗ್ತಿದೆ. ವಿವಿಪ್ಯಾಟ್​​ನಲ್ಲೂ ಕೂಡ 7 ಸೆಕೆಂಡ್​​ಗಳವರೆಗೆ ಡಿಸ್​​ಪ್ಲೇ ಆಗಬೇಕಿರೋದು ಕೇವಲ 3 ಸೆಕೆಂಡ್​​ ಡಿಸ್​ಪ್ಲೇ ಆಗುತ್ತಿದೆ ಎಂದು ಆರೋಪಿಸಿದ್ರು.

ಫಿಸಿಕಲ್ ವೇರಿಫಿಕೇಷನ್​ ಇಲ್ಲದೆ ಲಕ್ಷಾಂತರ ಮತದಾರರ ಹೆಸರನ್ನು ಡಿಲೀಟ್​​ ಮಾಡಲಾಗಿದೆ. ಚುನಾವಣಾ ಆಯೋಗಕ್ಕೆ ಪಕ್ಷಗಳು ದೊಡ್ಡ ಪಟ್ಟಿಯನ್ನೇ ನೀಡಿವೆ. ವಿವಿಪ್ಯಾಟ್​​ನಲ್ಲಿನ ಕನಿಷ್ಟ ಶೇ. 50ರಷ್ಟಾದರೂ ಪೇಪರ್​ ಟ್ರಯಲ್ ಎಣಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್​​ನಲ್ಲೂ ಇದೇ ಒತ್ತಾಯ ಮಾಡಲಿದ್ದೇವೆ ಎಂದು ಅವರು ಹೇಳಿದ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv