ತಿಂಗಳಾದ್ರೂ ಸಿಗದ ಗಣಿ ಕಾರ್ಮಿಕರ ಸುಳಿವು

ಸಿಲ್ಲಾಂಗ್​: ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ 15 ಮಂದಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡು ತಿಂಗಳಾಗುತ್ತಾ ಬಂದ್ರೂ, ಇನ್ನೂ ಅವರ ಸುಳಿವು ಸಿಕ್ಕಿಲ್ಲ. ಸತತ 29 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಸಾಗ್ತಾನೆ ಇದೆ. ಈ ಬಗ್ಗೆ ವಾರದ ಹಿಂದೆಯೇ ಮೇಘಾಲಯ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಗಣಿಯಲ್ಲಿ ಸಿಕ್ಕಿ ಹಾಕಿಕೊಂಡಿರುವವರ ರಕ್ಷಣೆಗೆ ಸಮರ್ಪಕ ಕ್ರಮ ಕೈಗೊಳ್ಳಿ ಎಂದು ಸೂಚಿಸಿತ್ತು, ಇದರ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜನೆ ಮಾಡಿ ಕಾರ್ಯಾಚರಣೆ ಕೈಗೊಂಡಿತ್ತು. ಆದ್ರೆ ಗಣಿಯಲ್ಲಿ ಜಾಸ್ತಿ ನೀರು ಸೇರಿರುವ ಕಾರಣ ಕಾರ್ಯಾಚರಣೆ ವಿಳಂಬವಾಗ್ತಿದೆ ಎಂದು ತಿಳಿದು ಬಂದಿದೆ.

ಇನ್ನು ಡಿಸೆಂಬರ್​ 13ರಂದು 20 ಕಾರ್ಮಿಕರು ಕಲ್ಲಿದ್ದಲು ಱಟ್​ ಹೋಲ್ ಪ್ರವೇಶಿಸಲು ಹೋಗಿದ್ದಾಗ, ಲಿಟೆನ್​ ಎಂಬ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ, ಗಣಿಯೊಳಕ್ಕೆ ನೀರು ನುಗ್ಗಿ 15 ಮಂದಿ ಕಾರ್ಮಿಕರು ಸಿಲುಕಿದ್ದರು. ಉಳಿದ 5 ಮಂದಿ ಮೇಲಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರು. ಸದ್ಯದ ಬೆಳವಣಿಗೆಯಲ್ಲಿ ಮಂಗಳವಾರ ಭಾರತೀಯ ನೌಕಾಪಡೆ ಕಾರ್ಯಚರಣೆ ಕೈಗೊಂಡಿದ್ದು, ರಿಮೋರ್ಟ್​ ಆಪರೇಟೆಡ್​ ವಾಹನದ ಮೂಲಕ ಗಣಿಯೊಳಕ್ಕೆ ಇಳಿದು ಎರಡು ಱಟ್​ ಹೋಲ್​ಗಳನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಱಟ್​ ಹೋಲ್​ಗಳ ಒಳಕ್ಕೆ ಹೋಗಿ ಕಾರ್ಮಿಕರನ್ನ ಪತ್ತೆ ಹಚ್ಚಲು ನೌಕಾಪಡೆ ಮುಂದಾಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಳ್ತಿದೆ.