ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ..? ಕುತೂಹಲ ಮೂಡಿಸಿದ ಜಾರಕಿಹೊಳಿ ಹೇಳಿಕೆ..!

ಬೆಂಗಳೂರು: ಇಷ್ಟುದಿನ ಲೋಕಸಭೆ ಚುನಾವಣೆಯಲ್ಲಿ ಮುಳುಗಿದ್ದ ರಾಜ್ಯ ರಾಜಕಾರಣ ಇನ್ಮುಂದೆ ಆಪರೇಷನ್​ ಕಮಲದತ್ತ ವಾಲುತ್ತಾ? ಅನ್ನೋ ಪ್ರಶ್ನೆ ಮತ್ತೆ ಮೂಡಿದೆ. ಅದಕ್ಕೆ ಕಾರಣ ಇಂದು ಕಾಂಗ್ರೆಸ್​ನ ಅತೃಪ್ತ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊಟ್ಟಿರುವ ಹೇಳಿಕೆ.

ಮೊನ್ನೆ ಕೂಡ ಗೋಕಾಕ್​ನಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ರಮೇಶ್​ ಜಾರಕಿಹೊಳಿ, ಕಾಂಗ್ರೆಸ್​ನಿಂದ ನನಗೆ ಮೋಸ ಆಗಿದೆ. ಶೀಘ್ರದಲ್ಲೇ ಬಿಜೆಪಿ ಸೇರುತ್ತೇನೆ. ಹೀಗಾಗಿ ಬಿಜೆಪಿಯನ್ನ ಬೆಂಬಲಿಸಿ ಅಂತಾ ಸಭೆಗೆ ಹಾಜಾರಾಗಿದ್ದ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಅದ್ರಂತೆ ಇಂದು ವೋಟಿಂಗ್ ನಡೆಸಿ ಮಾಧ್ಯಮಗಳ ಜೊತೆ ಮತ್ತೆ ಮಾತನಾಡಿರುವ ರಮೇಶ್​ ಜಾರಕಿಹೊಳಿ, ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

‘ನಾನು ಸದ್ಯ ಕಾಂಗ್ರೆಸ್ ಬಿಟ್ಟಿಲ್ಲ, ತಾಂತ್ರಿಕವಾಗಿ ಪಕ್ಷದಲ್ಲಿದ್ದೇನೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸಚಿವ ಸತೀಶ್​​ ಜಾರಕಿಹೊಳಿ ತಲೆ ಕೆಟ್ಟಿರುವ ಹಾಗೆ ಮಾತನಾಡುತ್ತಿದ್ದಾನೆ. ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಮುಂದೆ ಮಾತನಾಡುತ್ತೇನೆ’

– ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ

ರಮೇಶ್ ಜಾರಕಿಹೊಳಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿಯನ್ನೇ ಸೃಷ್ಟಿಸುವ ಮುನ್ಸುಚನೆ ನೀಡಿದೆ ಎನ್ನಲಾಗುತ್ತಿದೆ. ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರವನ್ನ ಬೀಳಿಸಿ ಮತ್ತೆ ಬಿಜೆಪಿ ಸರ್ಕಾರವನ್ನ ಅರಳಿಸುವ ಕನಸು ಕಾಣುತ್ತಿರುವ ನಾಯಕರು, ರಮೇಶ್​ ಜಾರಕಿಹೊಳಿ ಮೂಲಕವೇ ತಮ್ಮ ಕಾರ್ಯಾಚರಣೆ ಶುರುಮಾಡುತ್ತಾರಾ ಅನ್ನೋ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ.

ಫಸ್ಟ್​ನ್ಯೂಸ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಳೆದ 10 ತಿಂಗಳಲ್ಲಿ 4 ಬಾರಿ ಆಪರೇಷನ್ ಕಮಲಕ್ಕೆ ಮುಂದಾಗಿತ್ತು ಎನ್ನಲಾಗುತ್ತಿದೆ. 4 ಬಾರಿ ಆಪರೇಷನ್​ ಕಮಲದಲ್ಲಿ ಸೋತರೂ, ಈ ಬಾರಿ ಬಿಡಲೇ ಬಾರದು. ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರವನ್ನ ಬೀಳಿಸಿಯೇ ತೀರಬೇಕು ಅನ್ನೋ ಇರಾದೆಯಲ್ಲಿ 5ನೇ ಬಾರಿಗೆ ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ವೇದಿಕೆ ಸಜ್ಜು ಮಾಡ್ಕೊಂಡಿದ್ದಾರೆ ಎನ್ನಲಾಗುತ್ತಿದೆ.

ಯಾಕಂದ್ರೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 104 ಕ್ಷೇತ್ರಗಳನ್ನ ಗೆದ್ದು, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಕೈಯಲ್ಲಿ ಆಡಳಿತ ಇಲ್ಲ. ಇದು ಬಿಜೆಪಿಗೆ ಅರಗಿಸಿಕೊಳ್ಳಲಾಗ ಸಂಕಷ್ಟವೇ ಸರಿ. ಹೀಗಾಗಿ ಮತ್ತೆ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಮುಂದಾಗುತ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಜೊತೆಗೆ ಈ ವಿಚಾರದಲ್ಲಿ ಕಮಲ ನಾಯಕರ ನಡೆ ಏನು ಅನ್ನೋದು ಕೂಡ ತೀವ್ರ ಕುತೂಹಲ ಸೃಷ್ಟಿಸಿದೆ. ಈ ಹಿಂದೆ ಯಾವ್ಯಾವ ಸಮಯದಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿತ್ತು? ಅದು ಯಾಕೆ ಫೆಲ್ಯೂರ್ ಆಯ್ತು. ಅನ್ನೋದರ ಕಂಪ್ಲೀಟ್  ಮಾಹಿತಿ ಹೀಗಿದೆ.

ಆಪರೇಷನ್ 1: ಮಾಹಿತಿ ಪ್ರಕಾರ, 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಸಿದ್ಧರಾಗಿದ್ದರು. ಮುಂದುವರಿದ ಭಾಗವಾಗಿ ಮೇ 15ರ ಫಲಿತಾಂಶದ ಬಳಿಕ ಬಿಎಸ್​ವೈ ಮುಖ್ಯಮಂತ್ರಿ ಪಟ್ಟಕ್ಕೇರಿ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದರು. ಅಂದು ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರುಗಳು ಹಾಗೂ ಬಿ.ಶ್ರೀರಾಮುಲು ಅವರನ್ನು ನಂಬಿಕೊಂಡು ಆಪರೇಷನ್ ಫೆಲ್ಯೂರ್ ಆಗಿದೆ. ಪರಿಣಾಮ ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ರಾಜೀ‌ನಾಮೆ ನೀಡಿ ಹೊರ ಬರಬೇಕಾಯಿತು.

ಆಪರೇಷನ್ 2: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಮುಂದಾಗಿದ್ದರಂತೆ. ವಿಪಕ್ಷ ಸ್ಥಾನದಲ್ಲಿ ಕೂತಿದ್ದ ಯಡಿಯೂರಪ್ಪ ಕಾಂಗ್ರೆಸ್​ ಶಾಸಕರನ್ನ ಸೆಳೆಯಲು ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದ್ದರು. ರೈತರ ಸಾಲ ಮನ್ನಾ, ಸಮ್ಮಿಶ್ರ ಸರ್ಕಾರದ ವೈಫಲ್ಯ ಇಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದರು. ರೈತರ ಸಾಲ ಮನ್ನಾ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದ್ರೋಹ ಮಾಡುತ್ತಿದ್ದಾರೆ ಅಂತಾ ಬಿಂಬಿಸಿ ಕಾಂಗ್ರೆಸ್​ ಶಾಸಕರನ್ನ ಸೆಳೆಯಲು ಹೋಗಿ ಬಿ.ಎಸ್.ಯಡಿಯೂರಪ್ಪ ಆ್ಯಂಡ್​ ಟೀಮ್ ಫೇಲ್ಯೂರ್ ಆಗಿದೆ.

ಆಪರೇಷನ್ 3: ಬಜೆಟ್‌ಗೂ ಮುನ್ನಾ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಯಿತು. ಈ ವೇಳೆ ಅತೃಪ್ತ ಶಾಸಕರನ್ನ ಬಿಎಸ್​ವೈ ಸೆಳೆಯಲು ಮುಂದಾಗಿದ್ದರು. ಸಂಪುಟ ಪುನಾರಚನೆ ಆದಾಗ ಅದರ ಪ್ರಯೋಜನ ಪಡೆಯಲು ಹೋಗಿ ಯಡಿಯೂರಪ್ಪ ಆ್ಯಂಡ್ ಟೀಂ ಫೆಲ್ಯೂರ್ ಆಗಿದೆ ಎಂದು ಹೇಳಲಾಗುತ್ತಿದೆ.

ಆಪರೇಷನ್ 4: ಸಮ್ಮಿಶ್ರ ಸರ್ಕಾರದ ಚೊಚ್ಚಲ ಪರಿಪೂರ್ಣ ಬಜೆಟ್ ಸಂದರ್ಭದಲ್ಲಿ ಗುರುಮಿಟ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡರನ್ನು ಸೆಳೆಯಲು ಹೋಗಿ ಅಡಿಯೋ ರೆಕಾರ್ಡ್‌ನಲ್ಲಿ ಸಿಲುಕಿ ಯಡಿಯೂರಪ್ಪ ಮುಜುಗರಕ್ಕೆ ಒಳಗಾದರು. ಬಜೆಟ್​ ದಿನವೇ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್​ವೈ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎನ್ನಲಾಗಿರುವ ಆಡಿಯೋ ಒಂದನ್ನ ರಿಲೀಸ್​ ಮಾಡಿದರು. ಇದು ರಾಷ್ಟ್ರ ರಾಜಕಾರಣದಲ್ಲಿಯೂ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಈ ಮೂಲಕ ಯಡಿಯೂರಪ್ಪರ 4ನೇ ಬಾರಿಯ ‘ಆಪರೇಷನ್ ಕಮಲ’ದ ಪ್ಲಾನ್ ಫ್ಲಾಪ್​​​ ಆಗಿ ಹೋಯಿತು.

ಇಷ್ಟೆಲ್ಲಾ ಆದ ಬಳಿಕ ಈಗ 5ನೇ ಬಾರಿಗೆ ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಕೈಹಾಕಿದ್ದಾರೆ ಎನ್ನಲಾಗುತ್ತಿದೆ. ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮೂಲಕ ಆಪರೇಷನ್‌ಗೆ ಚಾಲನೆ ನೀಡಿ, ಸಮ್ಮಿಶ್ರ ಸರ್ಕಾರವನ್ನ ಉರುಳಿಸಿ ಮತ್ತೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್​ ನಡೆಸ್ತಿದೆಯಂತೆ. ಅದೇನೇ ಇರಲಿ ಸದ್ಯ ಆಪರೇಷನ್ ಕಮಲಕ್ಕಾಗಿ ರಾಜ್ಯ ನಾಯಕರ ನಡೆ ಏನು ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

ವಿಶೇಷ ವರದಿ: ಪಿ.ಮಧುಸೂಧನ್


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv