ಸಂಸತ್​​ನಲ್ಲೂ ಬಿಸಿ ಏರಿಸಿದ ಆಪರೇಷನ್​ ಕಮಲ ಆಡಿಯೋ..!

ನವದೆಹಲಿ: ಬಿಜೆಪಿಯ ಆಪರೇಷನ್​​ ಕಮಲ ಆಡಿಯೋ ವಿಚಾರ ಸಂಸತ್​ನಲ್ಲೂ ಪ್ರತಿಧ್ವನಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ, ಗುರುಮಿಠ್ಕಲ್​ ಶಾಸಕ ನಾಗನಗೌಡಗೆ ಆಮಿಷವೊಡ್ಡಿದ್ದಾರೆಂದು ಆರೋಪಿಸಿ ಕಳೆದ ಶುಕ್ರವಾರ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಆಡಿಯೋವೊಂದನ್ನ ಬಿಡುಗಡೆ ಮಾಡಿದ್ರು. ಈ ಆಡಿಯೋ ವಿಚಾರವನ್ನ ಇಂದು  ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​​ ಖರ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ರು.

ಬಿಜೆಪಿ ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯವರು ಕಾಂಗ್ರೆಸ್​​ ಶಾಸಕರನ್ನ ಖರೀದಿ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಖರ್ಗೆ ಹೇಳಿದರು. ಇದಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿರುಗೇಟು ನೀಡಿ, ಕಾಂಗ್ರೆಸ್​ ರೆಸಾರ್ಟ್​ ಪಾಲಿಟಿಕ್ಸ್​ಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಿದೆ. ಮೊದಲು ಆಡಿಯೋದ ಅಸಲೀಯತ್ತು ಪರಿಶೀಲನೆಯಾಗಬೇಕಿದೆ ಎಂದು ಹೇಳಿದ್ರು.

ಇನ್ನು ಹೆಚ್​ಡಿ ದೇವೇಗೌಡ ಮಾತನಾಡಿ, 2009ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಪರೇಷನ್​ ಕಮಲ ನಡೆಯಿತು. ಈ ರೀತಿಯ ಆಪರೇಷನ್​ ನಡೆಯಬಾರದು ಎಂದು ನಾನು ಈ ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ. ಇಂಥ ಪರಿಸ್ಥಿತಿ ಎಂದೂ ಬರಬಾರದು ಎಂದು ಹೇಳಿದ್ರು.