ನವದೆಹಲಿ: ಬಿಜೆಪಿಯ ಆಪರೇಷನ್ ಕಮಲ ಆಡಿಯೋ ವಿಚಾರ ಸಂಸತ್ನಲ್ಲೂ ಪ್ರತಿಧ್ವನಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಗುರುಮಿಠ್ಕಲ್ ಶಾಸಕ ನಾಗನಗೌಡಗೆ ಆಮಿಷವೊಡ್ಡಿದ್ದಾರೆಂದು ಆರೋಪಿಸಿ ಕಳೆದ ಶುಕ್ರವಾರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಡಿಯೋವೊಂದನ್ನ ಬಿಡುಗಡೆ ಮಾಡಿದ್ರು. ಈ ಆಡಿಯೋ ವಿಚಾರವನ್ನ ಇಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ರು.
ಬಿಜೆಪಿ ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಖರ್ಗೆ ಹೇಳಿದರು. ಇದಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿರುಗೇಟು ನೀಡಿ, ಕಾಂಗ್ರೆಸ್ ರೆಸಾರ್ಟ್ ಪಾಲಿಟಿಕ್ಸ್ಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಿದೆ. ಮೊದಲು ಆಡಿಯೋದ ಅಸಲೀಯತ್ತು ಪರಿಶೀಲನೆಯಾಗಬೇಕಿದೆ ಎಂದು ಹೇಳಿದ್ರು.
ಇನ್ನು ಹೆಚ್ಡಿ ದೇವೇಗೌಡ ಮಾತನಾಡಿ, 2009ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ನಡೆಯಿತು. ಈ ರೀತಿಯ ಆಪರೇಷನ್ ನಡೆಯಬಾರದು ಎಂದು ನಾನು ಈ ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ. ಇಂಥ ಪರಿಸ್ಥಿತಿ ಎಂದೂ ಬರಬಾರದು ಎಂದು ಹೇಳಿದ್ರು.