ತೆರೆದ ನೀರಿನ ಸಂಪ್​ಗೆ ಮಗು ಬಲಿ

ಬೆಂಗಳೂರು: ನೀರಿನ ಸಂಪ್​ಗೆ ಬಿದ್ದು ಎರಡೂವರೆ ವರ್ಷದ ಮಗು, ಅರ್ಹಾನ್ ಸಾವನ್ನಪ್ಪಿದ್ದಾನೆ. ಆಟವಾಡುವಾಗ ಆಯ ತಪ್ಪಿ ಮನೆ ಬಳಿಯಿದ್ದ ನೀರಿನ ಸಂಪ್​ಗೆ ಮಗು ಬಿದ್ದಿದೆ. ನಾಗವಾರದ ಮಂಜುನಾಥ ಲೇಔಟ್​ನಲ್ಲಿ ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಗುವನ್ನು ಬಲಿ ಪಡೆದ ಸಂಪ್​ನ ಅರೆಬರೆ ಕಾಮಗಾರಿ ನಡೆಸಿ, ಮೂರು ವರ್ಷಗಳ ಹಿಂದೆಯೇ ಕಾಮಗಾರಿ ನಿಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸಂಪನ್ನು ಸಂಪೂರ್ಣವಾಗಿ ತೆರೆದೇ ಬಿಟ್ಟಿದ್ದರು. ಈ ಹಿಂದೆಯೂ ಸಾಕಷ್ಟು ಅವಘಡಗಳಿಗೆ ಕಾರಣವಾಗಿದ್ದ ಈ ತೆರೆದ ಸಂಪಿನ ದುರಸ್ತಿಗೆ ಸ್ಥಳೀಯರು ಮನೆ ಮಾಲೀಕರ ಗಮನಕ್ಕೆ ತಂದರೂ ಮನೆ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಸದ್ಯ ಮಾಲೀಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಂಪಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv