ವಿಶ್ವವೇ ತಲೆಬಾಗಿತು ಮಹಾತ್ಮನಿಗೆ, ನೀವು ಈ ಹಾಡು ಕೇಳಲೇಬೇಕು

ಇಂದು ಮಾಹಾತ್ಮ ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿಶೇಷ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಗಾಂಧೀಜಿಯವರ ಅಚ್ಚುಮೆಚ್ಚಿನ “ವೈಷ್ಣವ ಜನತೋ ತೇನೆ ಕಹಿಯೇ” ಗೀತೆಯನ್ನು ಚಿತ್ರಿಸಲಾಗಿದೆ. ವಿಶ್ವದ ನಾನಾ ಭಾಗಗಳಿಂದ ಅನೇಕ ಕಲಾವಿದರು ಈ ಹಾಡಿಗೆ ದನಿಗೂಡಿಸಿದ್ದಾರೆ.

ಭಾರತೀಯ ರಾಯಭಾರೀ ಕಚೇರಿಗಳು ಹಾಗೂ 124 ದೇಶಗಳ ರಾಯಭಾರಿಗಳು ಸ್ಥಳೀಯ ಕಲಾವಿದರನ್ನ ಭೇಟಿ ಮಾಡಿ ಅವರಿಂದ ವೈಷ್ಣವ ಜನತೋ ಗೀತೆಯನ್ನ ಹಾಡಿಸಿದ್ದಾರೆ. 15ನೇ ಶತಮಾನದ ಈ ಗುಜರಾತಿ ಪ್ರಾರ್ಥನಾ ಗೀತೆಯನ್ನ ಕವಿ ನರಸಿನ್ಹ ಮೆಹ್ತಾ ರಚಿಸಿದ್ದರು.

ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆಗಾಗಿ ಸುಮಾರು 40 ದೇಶಗಳ ಕಲಾವಿದರು ವೈಷ್ಣವೋ ಜನತೋ ಗೀತೆಯನ್ನು ಹಾಡಿದ್ದು, ವಿಶ್ವದ ಪ್ರತಿ ಪ್ರಾಂತ್ಯವನ್ನು 1-2 ಸಣ್ಣ ಕ್ಲಿಪ್​​​ಗಳಲ್ಲಿ ತೋರಿಸಲಾಗಿದೆ. ಇನ್ನು ಈ ವಿಡಿಯೋದ ಸ್ಟಾರ್​ ಎಂದರೆ ಪೆಸಿಫಿಕ್​​ ಸಮುದ್ರದ ಸಣ್ಣ ದ್ವೀಪ ರಾಷ್ಟ್ರವಾದ ನೌರೂದ ಅಧ್ಯಕ್ಷ ಬ್ಯಾರನ್​ ದಿವಾವೇಸಿ ವಾಕಾ. ವಾಕಾ ಅವರ ಈ ಗೆಸ್ಚರ್​​ ಗಾಂಧೀಜಿಗೆ ಸಲ್ಲಿಸಿದ ಗೌರವವಷ್ಟೇ ಅಲ್ಲ, ಇದು ಪ್ರಧಾನಿ ಮೋದಿಗೆ ಅವರು ನೀಡಿರುವ ವೈಯಕ್ತಿಕ ಗಿಫ್ಟ್​ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಶ್ರೀಲಂಕಾ, ಮಾಲ್ಡೀವ್ಸ್​, ಲಾವೋಸ್​, ನೇಪಾಳ, ಅಫ್ಘಾನಿಸ್ತಾನ, ಕೊಲಂಬಿಯಾ, ಕೆನಡಾ, ಕಿರ್ಗಿಸ್ತಾನ್, ಓಮನ್, ಅಜೇರ್​ಬೈಜಾನ್, ಚೀನಾ, ಜರ್ಮನಿ, ಬಾಂಗ್ಲಾದೇಶ, ಸಿಂಗಾಪುರ, ನೌರು, ಮಂಗೋಲಿಯಾ, ಅರ್ಮೇನಿಯಾ, ತುರ್ಕ್​​​​​​ಮೇನಿಸ್ತಾನ್, ಇಟಲಿ, ಬಹ್ರೇನ್, ಇರಾನ್​​, ಸೌದಿ ಅರೇಬಿಯಾ, ಪಾಕಿಸ್ತಾನ, ಭುತಾನ್, ಗುಯಾನಾ, ಪೋರ್ಚುಗಲ್, ಉಜ್ಬೇಕಿಸ್ತಾನ್​​​, ನೈಜೀರಿಯಾ, ಡೆನ್​​ಮಾರ್ಕ್​​​, ಫಿನ್​ಲ್ಯಾಂಡ್​, ಮ್ಯಾನ್ಮಾರ್​​, ಪಪೂವಾ ನ್ಯೂ ಗಿನಿಯಾ, ಕ್ಯೂಬಾ, ರಷ್ಯಾ, ಸ್ಪೇನ್, ಟ್ಯೂನೀಸಿಯಾ, ನಮೀಬಿಯಾ, ತಾಂಜಾನಿಯಾ, ಸ್ವೀಡನ್ ಹಾಗೂ ಜಪಾನ್​​ನ ಕಲಾವಿದರು ಈ ಗೀತೆಯನ್ನು ಹಾಡಿ ಮಹಾತ್ಮನಿಗೆ ವಂದಿಸಿದ್ದಾರೆ.

ಇನ್ನು ಈ ಹಾಡಿನ ಲಿಂಕ್​ ಟ್ವೀಟ್ ಮಾಡಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಾಪು ವಿಶ್ವವನ್ನು ಒಂದು ಗೂಡಿಸುತ್ತಾರೆ ಅಂತಾ ಉದ್ಘಾರ ತೆಗೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv