ಹಾಡಹಗಲೇ ವೃದ್ಧನ ಮೇಲೆ ದಾಳಿ: ₹15,000 ದೋಚಿದ ದುಷ್ಕರ್ಮಿಗಳು

ಬೆಂಗಳೂರು: ಹಾಡಹಗಲೇ ವಯೋವೃದ್ಧನನ್ನು ಅಟ್ಯಾಕ್​ ಮಾಡಿದ ದುಷ್ಕರ್ಮಿಗಳಿಬ್ಬರು ಸಾವಿರಾರು ರೂಪಾಯಿ ದೋಚಿದ ಘಟನೆ ಚಿಕ್ಕಪೇಟೆಯ ಮೋಹನ್​ ಕಾಂಪ್ಲೆಕ್ಸ್​ನಲ್ಲಿ ನಡೆದಿದೆ.

 ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಗೆ ಚಿಕ್ಕಪೇಟೆಯ ಮೋಹನ್ ಕಾಂಪ್ಲೆಕ್ಸ್‌ಗೆ ವೃದ್ಧರೊಬ್ಬರು ಬಂದಿದ್ದರು. ತಮಿಳುನಾಡು ಮೂಲದ ಈ ವಯೋವೃದ್ಧ, ಮೋಹನ್​​ ಕಾಂಪ್ಲೆಕ್ಸ್​ನ ಪಕ್ಕದ ಓಣಿಯಲ್ಲಿ ಹಾದುಹೋಗುತ್ತಿದ್ದರು. ಖದೀಮರಿಬ್ಬರು ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಈ ವೇಳೆ ದಾರಿಹೋಕರಂತೆ ಬಂದ ಖದೀಮರಲ್ಲೊಬ್ಬ ಎರಡೂ ಕೈಗಳಿಂದ ವೃದ್ಧನ ಕುತ್ತಿಗೆಯನ್ನು ಹಿಂದಿನಿಂದ ಬಿಗಿಯಾಗಿ ಹಿಡಿದಿದ್ದ.
ಏನಾಗುತ್ತಿದೆ ಅಂತಾ ತಿಳಿಯದೆ ವೃದ್ಧ ಗಾಬರಿಗೊಂಡಿದ್ದಾರೆ. ಅಷ್ಟರಲ್ಲಿ ಇನ್ನೊಬ್ಬ ಖದೀಮ, ವೃದ್ಧನ ಜೇಬಿನಲ್ಲಿದ್ದ 15,000 ರೂಪಾಯಿ ಹಣ ತೆಗೆದುಕೊಂಡಿದ್ದಾನೆ. ಅಲ್ಲದೇ, ಇನ್ನೂ ಏನಾದರೂ ಸಿಗಬಹುದೇನೋ ಅಂತಾ ಆತನ ಬ್ಯಾಗನ್ನೂ ತಡಕಾಡಿದ್ದಾನೆ. ಅಷ್ಟರಲ್ಲಿ ಕುತ್ತಿಗೆಯ ಬಿಗಿತಕ್ಕೆ ವೃದ್ಧ ಸುಸ್ತಾಗಿ ಅಲ್ಲೇ ಕುಸಿದಿದ್ದಾರೆ.
ವೃದ್ಧನನ್ನು ಅಲ್ಲೇ ಬಿಟ್ಟ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ  ಚಿಕ್ಕಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv