180 ಅರ್ಹ ಫಲಾನುಭವಿಗಳಿದ್ರೂ ಸಾಗುವಳಿ ಮಾಡದ 15 ಜನರಿಗೆ ಗೋಮಾಳ ಜಾಗ ಮಂಜೂರು

ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​ ಅವರ ಕ್ಷೇತ್ರವಾದ ಕೊರಟಗೆರೆ ತಾಲೂಕಿನ ಪಣ್ಣೇನಹಳ್ಳಿ ಗ್ರಾಮದಲ್ಲಿ ಭೂಗಳ್ಳರ ಹಾವಳಿ ಮಿತಿಮಿರಿದೆ. ಪಣ್ಣೇನಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂ. 24ರಲ್ಲಿ 103 ಎಕರೆ ಗೋಮಾಳ ಜಾಗವಿದೆ. ಆದರೆ ಗೋಮಾಳ ಜಾಗವನ್ನು ಸಾಗುವಳಿ ಮಾಡದ 15 ಮಂದಿಗೆ ಹಿಂದಿನ ತಹಶೀಲ್ದಾರ್​​ ರಾಜಣ್ಣ ಹಾಗೂ ಕಂದಾಯ ಅಧಿಕಾರಿ ಗುರುಪ್ರಸಾದ್​​ ಮಂಜೂರು ಮಾಡಿದ್ದಾರೆ.
ಈ ಗೋಮಾಳ ಜಾಗಕ್ಕೆ 180 ಜನ ಅರ್ಹ ಫಲಾನುಭವಿಗಳು 1998-99ರಲ್ಲಿ ಅರ್ಜಿ ಹಾಕಿದ್ದರು. ಅವರನ್ನೆಲ್ಲಾ ಕಡೆಗಣಿಸಿ 15 ಜನರಿಂದ ಹಣ ಪಡೆದು ಸುಳ್ಳು ದಾಖಲೆ ಸೃಷ್ಟಿಸಿ ಅಧಿಕಾರಿಗಳು ಸಾಗುವಳಿ ಚೀಟಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮಾಜಿ ಶಾಸಕ ಸುಧಾಕರ್ ಲಾಲ್ ನೇತೃತ್ವದಲ್ಲೇ ಸಾಗುವಳಿ ಪತ್ರ ವಿತರಿಸಿದ್ದು, ಭೂಗಳ್ಳರ ಪರವಾಗಿ ಸುಧಾಕರ್ ಲಾಲ್ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಗುವಳಿ ಪತ್ರ ಪಡೆದ ವ್ಯಕ್ತಿಗಳು ಜೂನ್ 26 ರಂದು 103 ಎಕರೆ ಗೋಮಾಳದಲ್ಲಿದ್ದ 7 ಸಾವಿರ ಹೊಂಗೆ ಸಸಿಯನ್ನ ಏಕಾಏಕಿ ನೆಲಸಮ ಮಾಡಿಸಿ, ಉಳುಮೆ ಮಾಡಿಸಿದ್ದಾರೆ. ಡಿಸಿಎಂ ಕ್ಷೇತ್ರದಲ್ಲೇ ಈ ಮಟ್ಟದಲ್ಲಿ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿ ಭೂಕಬಳಿಸುತ್ತಿದ್ರೂ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv