ಜಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ಧೋರಣೆ ಖಂಡಿಸಿ ನರ್ಸ್​ಗಳಿಂದ ಪ್ರತಿಭಟನೆ

ಕಲಬುರ್ಗಿ: ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಹಾಗೂ ಟ್ರೈನಿ ನರ್ಸ್​ಗಳಾಗಿ ಸ್ಟೈಫಂಡರಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಹಾಲಿ ನೌಕರರ ಸೇವೆಯನ್ನು ಹೊರಗುತ್ತಿಗೆ ಪದ್ಧತಿಯಲ್ಲಿ ವಿಲೀನಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಹೈದರಾಬಾದ್ ಕರ್ನಾಟಕ ಶುಷ್ರೂಕರ ಅಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ರು. ಸ್ಟೈಫಂಡರಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 94 ಕರ್ತವ್ಯನಿರತ ನರ್ಸ್​ಗಳನ್ನು ಮೇ 31ರಂದು ರಿಲೀವಿಂಗ್​ ಮಾಡಿರುವುದಾಗಿ ಪ್ರಕಟಿಸಿದ್ದರು.‌ ಇದ್ರಿಂದ ನರ್ಸ್​ಗಳು ಕಂಗಾಲಾಗಿದ್ದು, ಕಾರ್ಮಿಕ ವಿರೋಧಿ ಜಿಮ್ಸ್ ಆಸ್ಪತ್ರೆ ನಿರ್ದೇಶಕರನ್ನು ವರ್ಗಾಯಿಸಬೇಕೆಂದು‌ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಸ್ಟೈಫಂಡರಿ ಆಧಾರದ‌‌ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಫ್​ ನರ್ಸ್​ಗಳ ಸೇವೆಯನ್ನು ಈ ಹಿಂದಿನ‌ ಪ್ರಕಾರ ಯಥಾವತ್ತಾಗಿ ಮುಂದುವರೆಸಬೇಕು. ತಕ್ಷಣವೇ ಹೊರಗುತ್ತಿಗೆಯನ್ನು ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅಷ್ಟೇ ಅಲ್ಲದೇ ರಾಜ್ಯದಲ್ಲಿರುವ 15 ಸ್ವಾಯತ್ತ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಇಲ್ಲ. ಆದ್ರೆ ಕಲಬುರ್ಗಿಯ‌ ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಹೊರಗುತ್ತಿಗೆ ಪದ್ಧತಿ ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದಲ್ಲದೇ ಕಾರ್ಮಿಕರ ನಿಯಮದ ಪ್ರಕಾರ ಕಲಬುರ್ಗಿ ಜಿಲ್ಲೆಯೂ ಸಹ ಬೆಂಗಳೂರಿನಂತೆ ವಲಯ 1ರ ವ್ಯಾಪ್ತಿಗೆ ಒಳಪಡುತ್ತದೆ. ಹೀಗಿದ್ದರೂ ಸ್ವಾಯತ್ತ ಸಂಸ್ಥೆಗಳ ಮಧ್ಯೆ ವೇತನ‌ ಸಮಾನತೆ ಏಕೆ ಕಾಪಾಡಿಕೊಳ್ಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು‌. ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ‌ ಸಲ್ಲಿಸಿದರು. ಪ್ರತಿಭಟನಾ ನಿರತ ನರ್ಸ್​ಗಳಿಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಸಾಥ್ ನೀಡಿ, ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಮ್ಸ್ ಆಸ್ಪತ್ರೆಗೆ ಮುತ್ತಿಗೆ ಹಾಕಿ‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv