ಗ್ರಾ ಪಂ ಪಿಡಿಓಗಳಿಗೆ ಜಿಲ್ಲಾಧಿಕಾರಿ ನೋಟಿಸ್​

ರಾಯಚೂರು: ಸ್ವಚ್ಛ ಭಾರತ್ ಮಿಷನ್ ಇದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು, ಈ ಯೋಜನೆ ಮೂಲಕ ನೈರ್ಮಲ್ಯ ಕಾಪಾಡಿ ದೇಶ ಸ್ವಚ್ಛವಾಗಿಡಲು ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಆದ್ರೆ ದೇಶದ ಕೆಲ ರಾಜ್ಯಗಳು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಚ್ಛವಾಗಿದ್ರೆ, ಇನ್ನು ಕೆಲ ರಾಜ್ಯಗಳು ಯೋಜನೆ ಬಗ್ಗೆ ಆಸಕ್ತಿ ವಹಿಸಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಕರ್ನಾಟಕದ ರಾಯಚೂರು ಜಿಲ್ಲೆ. ಹೌದು ಸ್ವಚ್ಛ ಭಾರತ್ ಮಿಷನ್ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡದ 100ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಪಿಡಿಓಗಳಿಗೆ ಜಿಲ್ಲಾಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ದೇಶದಲ್ಲಿಯೆ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಹೊಂದಿದೆ ರಾಯಚೂರು ಜಿಲ್ಲೆ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಭಿವೃದ್ಧಿಯ ಬಗ್ಗೆ ತೋರುವ ನಿರ್ಲಕ್ಷ, ನಿಷ್ಕಾಳಜಿಯೇ ಕಾರಣ. ಇದಕ್ಕೆ ಉದಾಹರಣೆ ಎನ್ನುವಂತೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ್ ಮಿಷನ್. ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿರುವ 184 ಗ್ರಾಮ ಪಂಚಾಯ್ತಿಗಳ, ಪೈಕಿ 100ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಸ್ವಚ್ಛ ಭಾರತ್ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ. ಕಳೆದ ಎರಡು ತಿಂಗಳಲ್ಲಿ ಯೋಜನೆಯ ಪ್ರಗತಿ ಶೂನ್ಯವಾಗಿದೆ. ಜಿಲ್ಲೆಯ ಆಯಾ ಗ್ರಾಮ ಪಂಚಾಯ್ತಿ ಪಿಡಿಓಗಳ ನಿರ್ಲಕ್ಷ ಧೋರಣೆಯೆ ರಾಯಚೂರು ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ ಎನ್ನಲಾಗ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರ ಸ್ವಚ್ಛ ಭಾರತ ಮಿಷನ್ ಅಧಿಕಾರಿಗಳು ಸಮರ್ಪಕ ಅನುಷ್ಠಾನಕ್ಕೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 184 ಗ್ರಾಮ ಪಂಚಾಯ್ತಿಗಳ ಪೈಕಿ, 118 ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡದ ಪಿಡಿಓಗಳಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಿದ್ದಾರೆ‌. ಈಗಾಗಲೇ 50 ಜನ ಪಿಡಿಓಗಳಿಗೆ ಜಿಲ್ಲಾಧಿಕಾರಿ ಡಾ: ಬಗಾದಿ ಗೌತಮ ಶೋಕಾಸ್ ನೋಟಿಸ್ ನೀಡಿದ್ದಾರೆ. ಏಳು ದಿನಗಳ ಒಳಗಾಗಿ ಉತ್ತರ ನೀಡಲು ಸೂಚಿಸಿದ್ದು, ಉತ್ತರ ಆಧರಿಸಿ ಪಿಡಿಓಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಯಾ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣ ಮಾಡಿ ಬಯಲು ಮುಕ್ತ ಗ್ರಾಮ ಮಾಡಬೇಕು. ಅಲ್ಲದೆ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ, ಕಸ ವಿಲೇವಾರಿ, ಸ್ವಚ್ಚತಾ ಅರಿವು ಕಾರ್ಯಕ್ರಮಗಳನ್ನು ಮಾಡಿ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಗ್ರಾಮಗಳನ್ನು ಸ್ವಚ್ಛವಾಗಿರುವಂತೆ ಮಾಡಬೇಕು. ಆದ್ರೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಅನುದಾನ ಸರಿಯಾಗಿ ಬಳಕೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸದ್ಯ ಈಗಾಗಲೇ ಜಿಲ್ಲಾಧಿಕಾರಿಗಳು ಆಯಾ ಪಂಚಾಯ್ತಿ ಪಿಡಿಓಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv