ಶಾಸಕ ಆನಂದ್ ಸಿಂಗ್​​ಗೆ ಜಾಮೀನುರಹಿತ ವಾರೆಂಟ್ ಮುಂದುವರಿಕೆ

ಬೆಂಗಳೂರು: ಕಾಂಗ್ರೆಸ್​ ಶಾಸಕ ಆನಂದ್ ಸಿಂಗ್​​ಗೆ ಜಾಮೀನು ರಹಿತ ವಾರೆಂಟ್ ಮುಂದುವರಿಕೆಯಾಗಿದೆ. ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದ ವಿಚಾರಣೆಯು ಇಂದೂ ಕೂಡ 82ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ನಿನ್ನೆ ನಡೆದ ವಿಚಾರಣೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾ. ಬಿ.ವಿ.ಪಾಟೀಲ್ ಇಬ್ಬರನ್ನೂ ಬಂಧಿಸಿ ಕೋರ್ಟ್​ಗೆ ಕರೆತರುವಂತೆ ಆದೇಶಿಸಿದ್ದರು. ಆದರೆ ಇವತ್ತಿನ ವಿಚಾರಣೆಯಲ್ಲೂ ಶಾಸಕ ಆನಂದ್ ಸಿಂಗ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಮುಂದುವರಿದಿದೆ.

ಇನ್ನು, ನಿನ್ನೆ ವಾರೆಂಟ್ ಜಾರಿಯಾದ ಬೆನ್ನಲ್ಲೇ ಇಂದು ಶಾಸಕ ನಾಗೇಂದ್ರ ಹಾಜರಾಗಿದ್ದರು. ಓರ್ವ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಕೆಲಸದ ಒತ್ತಡ ಇದ್ದ ಹಿನ್ನೆಲೆಯಲ್ಲಿ ಹಾಜರಾಗಿರಲಿಲ್ಲ. ವಾರದಲ್ಲಿ ಒಂದು‌ ದಿನ ಹಾಜರಾಗಲು ಅವಕಾಶ ನೀಡಬೇಕು ಅಂತಾ ನಾಗೇಂದ್ರ ಪರ ವಕೀಲ ಹೆಚ್.ಎಂ.ಫಜಲ್ ಕೋರ್ಟ್​ಗೆ ಹೇಳಿದರು. ಅದಕ್ಕೆ ನ್ಯಾ.ಬಿ.ವಿ.ಪಾಟೀಲ್, ಸುಪ್ರೀಂಕೋರ್ಟ್ ಆರೋಪಿಗಳ ಮುಂದೆಯೇ ವಿಚಾರಣೆ ಮಾಡಲು ಸೂಚಿಸಿದೆ. ಸಿಆರ್​​ಪಿಸಿ ಅಡಿಯಲ್ಲಿ ಅವಕಾಶ ನೀಡಲು ಬರುವುದಿಲ್ಲ ಅಂತಾ ಹೇಳಿದರು.

ಇನ್ನು, ಪ್ರಕರಣದ ಮತ್ತೋರ್ವ ಆರೋಪಿ ಸ್ವಸ್ತಿಕ್ ನಾಗರಾಜ್ ವೈರಲ್ ಫೀವರ್​​ನಿಂದ ಬಳಲುತ್ತಿದ್ದಾರೆ. ಅವರ ವಿರುದ್ಧ ಜಾರಿಯಾಗಿರುವ ವಾರೆಂಟ್ ತೆರವು ಮಾಡಬೇಕು ಅಂತಾ ಸ್ವಸ್ತಿಕ್ ನಾಗರಾಜ್ ಪರ ವಕೀಲರು ಕೋರ್ಟ್​ಗೆ ಮನವಿ ಮಾಡಿಕೊಂಡರು. ಇದಕ್ಕೆ ನ್ಯಾಯಾಧೀಶ ಬಿ.ವಿ.ಪಾಟೀಲ್ ನಾಗರಾಜ್, ವಾತಾವರಣ ಬದಲಾವಣೆಯಿಂದ ಜ್ವರ ಕಾಮನ್. ನಾಳೆ ಮತ್ತೆ ವಾತಾವರಣ ಬದಲಾವಣೆಯಾದ್ರೆ ನನಗೂ ಜ್ವರ ಬರುತ್ತದೆ. ನಿನ್ನೆ ವಾರೆಂಟ್ ಆರ್ಡರ್ ಆಗಿದೆ. ಅದನ್ನ ಬದಲಾಯಿಸಲು ಸಾಧ್ಯವಿಲ್ಲ ಅಂತಾ ಹೇಳಿ ವಿಚಾರಣೆಯನ್ನ ಜನವರಿ 16ಕ್ಕೆ ಮುಂದೂಡಿದರು. ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ 2013 ರಲ್ಲಿ ಲೋಕಾಯುಕ್ತದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ದಾಖಲಿಸಿದ್ದ ಪ್ರಕರಣದ ವಿಚಾರಣೆಯು 82ನೇ ಸಿಟಿ ಸಿವಿಲ್ ಕೋರ್ಟ್​​ನಲ್ಲಿ ನಡೆಯುತ್ತಿದೆ.