ಕೈ ಕೊಟ್ಟ ವರುಣ.. ಕಂಗಾಲಾದ್ರು ಅನ್ನದಾತರು..!

ರಾಯಚೂರು: ಜಿಲ್ಲೆಯಲ್ಲಿ ಕಳೆದ 15 ದಿನಗಳ ಹಿಂದೆ ನಿರಂತರವಾಗಿ ಮಳೆ ಸುರಿದಿತ್ತು. ಮುಂಗಾರು ಮಳೆಯನ್ನ ನಂಬಿ ಅಲ್ಲಿನ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರು. ಮಳೆ ನಂಬಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತನಿಗೆ ಬಿಗ್ ಶಾಕ್ ಆಗಿದೆ. ಕಳೆದ 15 ದಿನಗಳಿಂದ ಮಳೆ ಬಾರದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಒಟ್ಟು ಪ್ರದೇಶದ ಶೇಕಡಾ 30 ರಷ್ಟು ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ತೊಗರಿ, ಹತ್ತಿ, ಸಜ್ಜೆ, ನವಣೆ, ಶೆಂಗಾ, ಸೂರ್ಯಕಾಂತಿ ಹೀಗೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಕೆಲವೊಂದು ಬೀಜಗಳು ಮೊಳಕೆ ಒಡೆದಿವೆ, ಆದ್ರೀಗ ಮಳೆ ಕೈ ಕೊಟ್ಟ ಕಾರಣ ಬೆಳೆ ಒಣಗುವ ಭೀತಿ ಜಿಲ್ಲೆಯ ರೈತರಿಗೆ ಶುರುವಾಗಿದೆ. ಮಳೆ ಕೊರತೆ ಒಂದೆಡೆಯಾದ್ರೆ ಇನ್ನೂ ಮೊಳಕೆ ಒಡೆಯದೆ ಇರುವ ಬೀಜಗಳನ್ನು ಇಲಿ, ಹೆಗ್ಗಣಗಳು ತಿಂದು ಹಾಳು ಮಾಡುತ್ತಿವೆ. ಮಳೆ ಬಾರದೆ ಇರೋದ್ರಿಂದ ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೀಜಗಳನ್ನು ತಿನ್ನುವ ಸಲುವಾಗಿ ಜಮೀನಿನಲ್ಲಿ ಇಲಿ, ಹೆಗ್ಗಣಗಳ ಹಾವಳಿ ಜಾಸ್ತಿಯಾಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಬೆಳೆಯಿಲ್ಲದೆ ಕಷ್ಟಪಟ್ಟಿದ್ದಾರೆ. ಆದ್ರೆ ಈ ವರ್ಷ ಉತ್ತಮ ಮಳೆಯಾಗುತ್ತೆ ಅನ್ನೋ ಭರವಸೆ ಮೇಲೆ ಸಾಲ ಸೂಲ ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ. ಇದೀಗ ಮಳೆ ಕೈ ಕೊಟ್ಟಿರೋದ್ರಿಂದ ಮೊಳಕೆ ಎದ್ದಿರುವ ಬೆಳೆ ಒಣಗಿ ಹೋಗುವ ಭಯ ಶುರುವಾಗಿದೆ. ಇನ್ನು ಒಂದು ವಾರದಲ್ಲಿ ಸ್ವಲ್ಪವಾದರೂ ಮಳೆ ಬಾರದೆ ಹೊದರೆ  ಮೊಳಕೆ ಬಂದಿರುವ ಸಂಪೂರ್ಣ ಬೆಳೆ ಒಣಗಿ ಹೋಗುತ್ತೆ ಎಂಬುದು ರೈತರ ಆತಂಕ.

ಒಟ್ಟಾರೆಯಾಗಿ ಬಿಸಿಲನಾಡು ರಾಯಚೂರಿನಲ್ಲಿ ಮಳೆಗಾಲ ಆರಂಭವಾದರೂ ಬಿಸಿಲೂ ಮಾತ್ರ ಹಾಗೆ ಇದೆ. ಈ ವರ್ಷವೂ ಮಳೆ ಇಲ್ಲದೇ ಬರಗಾಲ ಬೀಳುತ್ತಾ ಅಂತ ರೈತರು ಚಿಂತೆಗಿಡಾಗಿದ್ದು, ಮಳೆಗಾಗಿ ಬಾನಿನತ್ತ ದೃಷ್ಟಿ ನೆಟ್ಟಿದ್ದಾರೆ.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv