ಕುಟುಂಬ ರಾಜಕಾರಣದ ಜೆಡಿಎಸ್ ಬಗ್ಗೆ ಚರ್ಚೆ ಅನಗತ್ಯ: ಶೆಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿರುವ ಜೆಡಿಎಸ್ ಒಂದು ಕುಟುಂಬ ರಾಜಕಾರಣದ ಪಕ್ಷ. ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದೇಶದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಸಂಬಂಧಿಸಿದ್ದವುಗಳೇ. ಪ್ರಾದೇಶಿಕ ಪಕ್ಷದ ಕಾರ್ಯಕರ್ತರು ಯೋಚಿಸಬೇಕು, ನಮಗೆ ಯಾವ ಪಾರ್ಟಿ ಉತ್ತಮ ಅಂತಾ. ದೇಶದಲ್ಲೇ ಕುಟುಂಬ ರಾಜಕಾರಣವಿರದ ಪಕ್ಷಯಾವುದಾದರೂ ಇದ್ದರೆ ಅದು ಭಾರತೀಯ ಜನತಾ ಪಾರ್ಟಿ ಎಂದು ಜಗದೀಶ್ ಶೆಟ್ಟರ್​ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಬಿದ್ದೋಗುತ್ತೆ.!
ಮೈತ್ರಿ ಸರ್ಕಾರ ನಿಗದಿಪಡಿಸಿರುವಂತೆ ಅಕ್ಟೋಬರ್​ 12 ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ. ಈ ಬಗ್ಗೆ ನಾನು ಬರೆದು ಕೊಡುತ್ತೇನೆ. ಸಚಿವ ಸಂಪುಟಕ್ಕೆ ಆರು ಜನ ಶಾಸಕರನ್ನು ಸೇರಿಸಿಕೊಳ್ಳಲಿ, ತಕ್ಷಣವೇ ಮೈತ್ರಿ ಸರ್ಕಾರ ಆಂತರಿಕ ಭಿನ್ನಮತದಿಂದ ಬಿದ್ದೋಗುತ್ತದೆ ಎಂದು ಶೆಟ್ಟರ್​ ಭವಿಷ್ಯ ನುಡಿದರು.

ಸಾಲ ಮನ್ನಾ ಜಾರಿಯಲ್ಲಿ ಸರ್ಕಾರ ವಿಫಲ
ರೈತರಿಗೆ ನೀಡಿದ ಭರವಸೆಯಂತೆ ಸಿಎಂ ಕುಮಾರಸ್ವಾಮಿ ಸಂಪೂರ್ಣ ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಿಲ್ಲ. ಇನ್ನು ರೈತರಿಗೆ ಬ್ಯಾಂಕ್​ನಿಂದ ನೋಟಿಸ್​ ಬರುತ್ತಲೇ ಇವೆ. ಇದೇ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ರೈತರಿಗೆ ನೋಟಿಸ್ ನೀಡಿದ ಬ್ಯಾಂಕ್ ಅಧಿಕಾರಗಳನ್ನು ಜೈಲಿಗೆ ಹಾಕಿ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಾರೆ. ಕಾನೂನಿನಲ್ಲಿ ಬ್ಯಾಂಕ್​ ಅಧಿಕಾರಿಗಳನ್ನು ಜೈಲಿಗೆ ಹಾಕಲು ಪ್ರಾವಿಜನ್ ಎಲ್ಲಿದೆ ಎಂದು ಪ್ರಶ್ನಿಸಿದರು.

ರಾಷ್ಟ್ರೀಕೃತ ಬ್ಯಾಂಕ್​​ಗಳಲ್ಲಿರುವ ಸಾಲ ಮನ್ನಾ ಮಾಡುವುದಕ್ಕಾಗಿ ರಾಷ್ಟ್ರಪತಿಗಳಿಗೆ ಪ್ರಪೋಸಲ್ ಕಳುಹಿಸಿದ್ದೇನೆ ಅಂತಾ ಮುಖ್ಯಮಂತ್ರಿಗಳು ಹೇಳುತ್ತಾರೆ. ಆ ಪ್ರಪೋಸಲ್ ಎಲ್ಲಿದೆ ಅನ್ನೋದನ್ನ ಯಾರ ಮುಂದೇನೂ ತೋರಿಸಿಲ್ಲ. ಈ ವಿಷಯದಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವಂತಹ ಕೆಲಸವನ್ನು ಸಿಎಂ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ರೈತರು ಸಫರ್ ಆಗುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಕಳವಳ ವ್ಯಕ್ತಪಡಿಸಿದರು.

ಚುನಾವಣೆ ಬಂದ್ರೆ ಸಾಕು ಪ್ರತ್ಯೇಕ ಲಿಂಗಾಯತ ಧರ್ಮದ ಡ್ರಾಮಾ ಶುರುವಾಗುತ್ತೆ..!
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ವಿಧಾನಸಭೆ ಚುನಾವಣೆಗೆ ಮುಂಚೆ ಬಂದಿತ್ತು. ಈಗ ಮತ್ತೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈಗ ಮತ್ತೆ ಹೋರಾಟ ಆರಂಭ ಮಾಡುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಹೋರಾಟದ ನೇತೃತ್ವ ವಹಿಸಿರೋರು ಯಾರು, ಅದಕ್ಕೆ ಕುಮ್ಮಕ್ಕು ಕೊಟ್ಟವರು ಯಾರು ಅಂತಾ ರಾಜ್ಯದ ಜನತೆಗೆ ಗೊತ್ತಿದೆ. ಚುವಾವಣೆಗಳು ಬಂದರೆ ಸಾಕು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಇಟ್ಟುಕೊಂಡು ಡ್ರಾಮಾ ಶುರು ಮಾಡುತ್ತಾರೆ ಎಂದು ಜಗದೀಶ್​ ಶೆಟ್ಟರ್ ಕಿಡಿಕಾರಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv