ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಆಗ್ರಹ, ರಾಜೀನಾಮೆಗೆ ಮುಂದಾದ 55ಕ್ಕೂ ಅಧಿಕ ಜನಪ್ರತಿನಿಧಿಗಳು

ಬೆಳಗಾವಿ: ಎಐಸಿಸಿ ಕಾರ್ಯದರ್ಶಿ ಸತೀಶ್​​ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಳೆದೆರಡು ದಿನಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಹೈಕಮಾಂಡ್​ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದಾಗಿ ಪ್ರತಿಭಟನೆಗೆ ಮುಂದಾಗಿದ್ದ ಅವರ ಬೆಂಬಲಿಗರು‌ ಇದೀಗ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಸಂಬಂಧ ಚರ್ಚೆ ಮಾಡಲು ಬೆಳಗಾವಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್​​​​ನಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಲ್ಲೆಯ 15ಜಿಪಂ ಸದಸ್ಯರು, 28 ತಾಪಂ‌ ಸದಸ್ಯರು, ಇಬ್ಬರು ಪಾಲಿಕೆ ಸದಸ್ಯರು, ಅಧ್ಯಕ್ಷ ಸೇರಿ 3 ಜಿಲ್ಲೆಯ ಎಪಿಎಂಸಿ ಸದಸ್ಯರು, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 55ಕ್ಕೂ ಅಧಿಕ ಜನಪ್ರತಿನಿಧಿಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆ ಜಿಲ್ಲಾ ರಾಜಕಾರಣದಲ್ಲಿ ಭಾರೀ ಮಹತ್ವ ಪಡೆದುಕೊಳ್ಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಹಲವರ​​ ಕುತಂತ್ರದಿಂದ ಸಚಿವ ಸ್ಥಾನ ತಪ್ಪಿದೆ’

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡ ಗಂಗಾಧರ ತವಗಮಠ ಅವರು, ಪಕ್ಷಕ್ಕೆ ಸತೀಶ್​​ ಜಾರಕಿಹೊಳಿ ಕೊಡುಗೆ ಅನನ್ಯ. ಪಕ್ಷ ಸತೀಶ್​​ ಜಾರಕಿಹೊಳಿ ಅವರಿಗೆ ಅನ್ಯಾಯ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ರಾಜ್ಯ ಉಸ್ತುವಾರಿ ವೇಣುಗೋಪಾಲ್​​​​, ರಾಷ್ಟ್ರೀಯ ನಾಯಕ ಅಹ್ಮದ್ ಪಟೇಲ್​​ ಅವರ ಕುತಂತ್ರದಿಂದ ಸತೀಶ್​ಗೆ ಮಂತ್ರಿ ಸ್ಥಾನ ಕೈ ತಪ್ಪಿದೆ ಎಂದು ಆರೋಪಿಸಿದರು. ಹೀಗಾಗಿ ನಾವು ಪಕ್ಷಕ್ಕೆ ಹಾಗೂ ನಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ. ಬಳಿಕ ಸತೀಶ್​​​ಜಾರಕಿಹೊಳಿ ಅವರನ್ನು ಭೇಟಿಯಾಗಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv